7ನೇ ತರಗತಿ ವಿಜ್ಞಾನ ಭಾಗ-2 ನೋಟ್ಸ್ /ಪ್ರಶ್ನೋತ್ತರಗಳು
ಜೀವಿಗಳಲ್ಲಿ ಉಸಿರಾಟ
ಅಧ್ಯಾಯ 10,
1. ಓಟವನ್ನು ಮುಗಿಸಿದ ಕ್ರೀಡಾಳುಗಳ ಶ್ವಾಸಕ್ರಿಯೆಯು ಸಾಮಾನ್ಯ ಶಾಸಕ್ರಿಯೆಗಿಂತ ವೇಗವಾಗಿ ಮತ್ತು ದೀರ್ಘವಾಗಿ ಇರುತ್ತದೆ. ಏಕೆ?
ಕ್ರೀಡಾಳು ತನ್ನ ಓಟದ ಸಂದರ್ಭದಲ್ಲಿ ತನ್ನಲ್ಲಿರುವ ಸ್ನಾಯುಗಳಿಗೆ ಹೆಚ್ಚುವರಿ ಶಕ್ತಿಯನ್ನು ಒದಗಿಸಬೇಕಾಗಿರುತ್ತದೆ. ಇದಕ್ಕಾಗಿ ಅವನು ವೇಗವಾಗಿ ಮತ್ತು ಆಳವಾಗಿ ಉಸಿರಾಡಿ ತನ್ನ ಜೀವಕೋಶಗಳಿಗೆ ಆಕ್ಸಿಜನ್ ಒದಗಿಸುತ್ತಾನೆ. ಇದರಿಂದ ಅವನ ಆಹಾರದ ಜೀರ್ಣಕ್ರಿಯೆ ವೇಗಗೊಂಡು ಹೆಚ್ಚುವರಿ ಶಕ್ತಿ ಅವನಿಗೆ ಸಿಗುತ್ತದೆ.
ಸಾಮಾನ್ಯ ಸ್ಥಿತಿಯಲ್ಲಿ ದೇಹಕ್ಕೆ ಹೆಚ್ಚುವರಿ ಶಕ್ತಿ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಅವನ ಉಸಿರಾಟ ಕ್ರಿಯೆ ಸಾಧಾರಣವಾಗಿರುತ್ತದೆ. ಓಟವನ್ನು ಮುಗಿಸಿದ ಸಂದರ್ಭ ಉಸಿರಾಟ ಕ್ರಿಯೆ ವೇಗವಾಗಿರುತ್ತದೆ.
2, ಆಕ್ಸಿಜನ್ ಸಹಿತ ಮತ್ತು ಆಕ್ಸಿಜನ್‌ರಹಿತ, ಉಸಿರಾಟಗಳ ನಡುವ ಸಾಮ್ಯತೆಗಳು ಮತ್ತು ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಆಮ್ಲಜನಕ ಸಹಿತ ಉಸಿರಾಟ ಮತ್ತು ಆಮ್ಲಜನಕ ರಹಿತ ಉಸಿರಾಟ
ಸಾಮ್ಯತೆಗಳು
ಇವೆರಡೂ ಉಸಿರಾಟಗಳು ಜೀವಿಗಳಲ್ಲಿ ನಡೆಯುತ್ತವೆ. ಮತ್ತು ಜೀವಿಗಳನ್ನು ಜೀವಂತವಾಗಿರಿಸುತ್ತವೆ. ಜೀವಿಗಳು ತಮ್ಮ ಜೀವ ಕ್ರಿಯೆಗಳನ್ನು ನಡೆಸಲು ಆಹಾರವನ್ನು ವಿಘಟಿಸಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ.
ವ್ಯತ್ಯಾಸಗಳು
ಆಮ್ಲಜನಕ ಸಹಿತ ಉಸಿರಾಟವು ಜೀವಿಗಳಲ್ಲಿ ಆಮ್ಲಜನಕದ ಉಪಸ್ಥಿತಿಯಲ್ಲಿ ಆಹಾರವನ್ನು ವಿಘಟಿಸುವ ಕ್ರಿಯೆಯಾಗಿದೆ. ಈ ಕ್ರಿಯೆಯ ಅಂತಿಮ ಉತ್ಪನ್ನಗಳು ಕಾರ್ಬನ್ ಡೈ ಆಕ್ಸೈಡ್, ನೀರು ಮತ್ತು ಶಕ್ತಿಯಾಗಿರುತ್ತದೆ. ಈ ಉಸಿರಾಟವು ಸಸ್ಯ ಹಾಗೂ ಪ್ರಾಣಿಗಳಲ್ಲಿ ನಡೆಯುತ್ತದೆ.
ಆಮ್ಲಜನಕ ರಹಿತ ಉಸಿರಾಟವು ಜೀವಿಗಳಲ್ಲಿ ಆಮ್ಲಜನಕ ಇಲ್ಲದೆಯೇ ಆಹಾರವನ್ನು ವಿಘಟಿಸುವ ಕ್ರಿಯೆಯಾಗಿದೆ. ಈ ಕ್ರಿಯೆಯ ಅಂತಿಮ ಉತ್ಪನ್ನಗಳು ಆಲ್ಕೋಹಾಲ್, ಕಾರ್ಬನ್ ಆಕ್ಸೈಡ್ ಮತ್ತು ಶಕ್ತಿಯಾಗಿರುತ್ತದೆ. ಈ ಉಸಿರಾಟವು ಯೀಸ್ಟ್ ಗಳು ಬ್ಯಾಕ್ಟೀರಿಯಾಗಳು ಮತ್ತು ಮಾನವನ ಸ್ನಾಯುಗಳಲ್ಲಿನ ಕೆಲವು ಜೀವಕೋಶಗಳಲ್ಲಿ ನಡೆಯುತ್ತದೆ.
3. ಹೆಚ್ಚು ಧೂಳು ತುಂಬಿದ ಗಾಳಿಯನ್ನು ಒಳತೆಗೆದುಕೊಂಡಾಗ ನಾವು ಸಾಮಾನ್ಯವಾಗಿ ಸೀನುತ್ತೇವೆ. ಏಕೆ?
ಹೆಚ್ಚು ಧೂಳು ತುಂಬಿದ ಗಾಳಿಯನ್ನು ಒಳಗೆಳೆದುಕೊಳ್ಳುವಾಗ ಈ ಕಣಗಳು ನಾಸಿಕ ಕುಹರದಲ್ಲಿರುವ ಕೂದಲುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಆದರೂ ಕೆಲವೊಮ್ಮೆ ಈ ಕಣಗಳು ನಾಸಿಕ ಕುಹರದ ಕೂದಲನ್ನು ದಾಟಿ ಮುಂದೆ ಹೋಗುತ್ತವೆ. ಅವು ಕುಹರದ ಗೋಡೆಗೆ ಕಿರಿ ಕಿರಿ ಉಂಟುಮಾಡಬಹುದು. ಅದರ ಫಲಿತಾಂಶವಾಗಿ ನಾವು ಸೀನುತ್ತೇವೆ. ಒಳತೆಗೆದುಕೊಂಡ ಗಾಳಿಯಿಂದ ಈ ಅನವಶ್ಯಕ ಕಣಗಳನ್ನು ಸೀನುವಿಕೆ ಹೊರಹಾಕುತ್ತದೆ. ಧೂಳುರಹಿತವಾದ ಸ್ವಚ್ಛ ಗಾಳಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ.
4. ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ, ಪ್ರತಿಯೊಂದನ್ನು 3/4 ರಷ್ಟು ನೀರಿನಿಂದ ತುಂಬಿಸಿ. ಅವುಗಳನ್ನು A, B ಮತ್ತು C ಎಂದು ಗುರುತು ಮಾಡಿ, A ಪ್ರನಾಳದಲ್ಲಿ ಒಂದು ಬಸವನಹುಳುವನ್ನು, B ಪ್ರನಾಳದಲ್ಲಿ ಒಂದು ಜಲಸಸ್ಯವನ್ನು ಮತ್ತು C ಪ್ರನಾಳದಲ್ಲಿ ಬಸವನಹುಳು ಮತ್ತು ಜಲಸಸ್ಯ ಎರಡನ್ನೂ ಇಡಿ, ಯಾವ ಪ್ರನಾಳದಲ್ಲಿ CO2 ನ ಸಾರತೆ ಹೆಚ್ಚಾಗುತ್ತದೆ?
A ಪ್ರನಾಳದಲ್ಲಿ ಕಾರ್ಬನ್ ಡೈಆಕ್ಸೈಡ್ ನ ಸಾರತೆ ಅತಿ ಹೆಚ್ಚು ಇರುತ್ತದೆ. ಏಕೆಂದರೆ ಈ ಪ್ರನಾಳದಲ್ಲಿ ಬಸವನಹುಳು ಇರುವುದರಿಂದ, ಬಸವನ ಹುಳುವು ಆಕ್ಸಿಜನ್ ಅನ್ನು ತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್ ಹೊರಬಿಡುತ್ತದೆ. ಹೀಗಾಗಿ ಈ ಪ್ರನಾಳದಲ್ಲಿ ಕಾರ್ಬನ್ ಡೈಆಕ್ಸೈಡ್ ನ ಸಾರತೆ ಅತಿ ಹೆಚ್ಚಾಗಿರುತ್ತದೆ.
B ಪ್ರನಾಳದಲ್ಲಿ ಜಲ ಸಸ್ಯವು ಆಹಾರ ತಯಾರಿಕೆಗಾಗಿ ಕಾರ್ಬನ್ ಡೈ ಆಕ್ಸೈಡ್ ಅನ್ನು ಬಳಸಿಕೊಂಡು ಆಕ್ಸಿಜನ್ ಅನ್ನು ಬಿಡುಗಡೆ ಮಾಡುತ್ತದೆ. ಆದುದರಿಂದ B ಪ್ರನಾಳದಲ್ಲಿ ಆಕ್ಸಿಜನ್ ನ ಸಾರತೆ ಹೆಚ್ಚಿಗೆ ಇರುತ್ತದೆ.
C ಪ್ರನಾಳದಲ್ಲಿ ಬಸವನ ಹುಳು ಮತ್ತು ಜಲ ಸಸ್ಯ ಎರಡು ಇರುವುದರಿಂದ ಬಸವನಹುಳು ಬಿಡುಗಡೆ ಮಾಡಿದ ಕಾರ್ಬನ್ ಡೈಆಕ್ಸೈಡ್ ಅನ್ನು ಜಲಸಸ್ಯವು ಆಹಾರ ತಯಾರಿಕೆಗಾಗಿ ಬಳಸಿಕೊಳ್ಳುತ್ತದೆ ಮತ್ತು ಜಲ ಸಸ್ಯವು ಬಿಡುಗಡೆ ಮಾಡಿದ ಆಕ್ಸಿಜನ್ ಅನ್ನು ಬಸವನ ಹುಳು ಉಸಿರಾಟಕ್ಕೆ ಬಳಸಿಕೊಳ್ಳುತ್ತದೆ.
ಆದುದರಿಂದ A ಪ್ರನಾಳದಲ್ಲಿ ಕಾರ್ಬನ್ ಡೈಆಕ್ಸೈಡ್ ನ ಸಾರತೆ ಅತಿ ಹೆಚ್ಚು ಇರುತ್ತದೆ.
5. ಸರಿ ಉತ್ತರವನ್ನು ಗುರುತು ಮಾಡಿ :
(ಎ) ಜಿರಳೆಗಳಲ್ಲಿ ಗಾಳಿಯು ದೇಹದ ಒಳಪ್ರವೇಶಿಸುವ ಭಾಗ
(i) ಶ್ವಾಸಕೋಶಗಳು
(ii) ಕಿವಿರುಗಳು
(iii) ಸ್ಪೈರಕಲ್‌ಗಳು
(iv) ಚರ್ಮ
ಉತ್ತರ
(iii) ಸ್ಪೈರಕಲ್‌ಗಳು
(ಬಿ) ತೀವ್ರ ವ್ಯಾಯಾಮದ ಸಮಯದಲ್ಲಿ ಇದರ ಸಂಗ್ರಹದಿಂದ ಕಾಲುಗಳಲ್ಲಿ ಸೆಳೆತ ಕಂಡುಬರುವುದು
(i) ಕಾರ್ಬನ್ ಡೈಆಕ್ಸೆಡ್ (ii) ಲ್ಯಾಕ್ಟಿಕ್ ಆಮ್ಲ
(iii) ಆಲ್ಕೋಹಾಲ್ (iv) ನೀರು
ಉತ್ತರ
(ii) ಲ್ಯಾಕ್ಟಿಕ್ ಆಮ್ಲ
(ಸಿ) ವಿಶ್ರಾಂತಿ ಸ್ಥಿತಿಯಲ್ಲಿರುವ ವಯಸ್ಕ ವ್ಯಕ್ತಿಯಲ್ಲಿ ಪ್ರತಿ ನಿಮಿಷಕ್ಕೆ ಶ್ವಾಸಕ್ರಿಯೆಯ ದರದ ಸಾಮಾನ್ಯ ವ್ಯಾಪ್ತಿ
(i) 9-12
(ii) 15-18
(iii) 21 – 24
(iv) 30-33
ಉತ್ತರ
(ii) 15-18
(ಡಿ) ನಿಶ್ವಾಸದ ಸಮಯದಲ್ಲಿ ಪಕ್ಕೆಲುಬುಗಳು
(i) ಹೊರಕ್ಕೆ ಚಲಿಸುತ್ತವೆ (ii) ಕೆಳಕ್ಕೆ ಚಲಿಸುತ್ತವೆ
(iii) ಮೇಲಕ್ಕೆ ಚಲಿಸುತ್ತವೆ
(iv) ಚಲಿಸುವುದೇ ಇಲ್ಲ
ಉತ್ತರ
(ii) ಕೆಳಕ್ಕೆ ಚಲಿಸುತ್ತವೆ
6. ಕಾಲಂ-1 ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ-II ರಲ್ಲಿರುವ ಸೂಕ್ತ ಹೊಂದಿಸಿ.
(a) ಯೀಸ್ಟ್……..ಆಲ್ಕೋಹಾಲ್
(b) ವಪೆ……….. ಎದೆಯ ಕುಹರ
(c) ಚರ್ಮ…….. ಎರೆಹುಳು
(d) ಎಲೆಗಳು…….. ಪತ್ರ ರಂದ್ರ
(e) ಮೀನು…….ಕಿವಿರುಗಳು
(f) ಕಪ್ಪೆ…………ಶ್ವಾಸಕೋಶಗಳು ಮತ್ತು ಚರ್ಮ
7. ಹೇಳಿಕೆ ಸರಿ ಇದ್ದರೆ ಸರಿ ಎಂದು ತಪ್ಪಿದ್ದರೆ ತಪ್ಪು ಎಂದು ಗುರ್ತಿಸಿ.
(ಎ) ತೀವ್ರ ವ್ಯಾಯಾಮದ ಸಂದರ್ಭದಲ್ಲಿ ವ್ಯಕ್ತಿಯ ಶ್ವಾಸಕ್ರಿಯೆಯ ದರ ಕಡಿಮೆಯಾಗುತ್ತದೆ.
(ಸರಿ ತಪ್ಪು)
ಉತ್ತರ
ತಪ್ಪು
(ಬಿ) ಸಸ್ಯಗಳು ದ್ಯುತಿಸಂಶ್ಲೇಷಣೆಯನ್ನು ಹಗಲಿನಲ್ಲಿ ಮಾತ್ರ ಮತ್ತು ಉಸಿರಾಟವನ್ನು ರಾತ್ರಿಯಲ್ಲಿ ಮಾತ್ರ ನಡೆಸುತ್ತವೆ. (ಸರಿ ತಪ್ಪು)
ಉತ್ತರ
ತಪ್ಪು
(ಸಿ) ಕಪ್ಪೆಗಳು ತಮ್ಮ ಚರ್ಮ ಹಾಗೂ ಶ್ವಾಸಕೋಶಗಳ ಮೂಲಕ ಶ್ವಾಸಕ್ರಿಯೆ ನಡೆಸುತ್ತವೆ. (ಸರಿ/ತಪ್ಪು)
ಉತ್ತರ
ಸರಿ
(ಡಿ) ಮೀನುಗಳಲ್ಲಿ ಉಸಿರಾಟಕ್ಕಾಗಿ ಶ್ವಾಸಕೋಶಗಳಿವೆ. (ಸರಿ/ತಪ್ಪು)
ಉತ್ತರ
ತಪ್ಪು
(ಇ) ಉಚ್ಛಾಸದಲ್ಲಿ ಎದೆಯ ಕುಹರದ ಗಾತ್ರ ಹೆಚ್ಚಾಗುತ್ತದೆ. (ಸರಿ/ತಪ್ಪು)
ಉತ್ತರ
ಸರಿ
7ನೇ ತರಗತಿ ವಿಜ್ಞಾನ ಭಾಗ 2
ಅಧ್ಯಾಯ 11
<span;>ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ
ಕಾಲಂ- 1ರಲ್ಲಿ ಕೊಟ್ಟಿರುವ ರಚನೆಗಳನ್ನು ಕಾಲಂ – II ರಲ್ಲಿ ಕೊಟ್ಟಿರುವ ಅವುಗಳ ಕಾರ್ಯಗಳೊಂದಿಗೆ ಹೊಂದಿಸಿ.
1)ಪತ್ರರಂಧ್ರ …………….ಭಾಷ್ಪ ವಿಸರ್ಜನೆ.
2)ಕ್ಸೈಲಂ…………………. ನೀರಿನ ಸಾಗಾಣಿಕೆ.
3) ಬೇರು ರೋಮಗಳು……… ನೀರಿನ ಹೀರುವಿಕೆ.
4)ಫ್ಲೋಯಂ…………….. ಆಹಾರ ಸಾಗಾಣಿಕೆ
2. ಬಿಟ್ಟ ಪದ ತುಂಬಿ :
(i) ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವುದು ಅಪಧಮನಿಗಳು.
(ii) ಹಿಮೋಗ್ಲೋಬಿನ್ ಹೊಂದಿರುವ ಕೋಶಗಳು ಕೆಂಪು ರಕ್ತ ಕಣಗಳು.
(iii) ಅಭಿಧಮನಿ ಮತ್ತು ಅಪಧಮನಿಗಳನ್ನು ಸೇರಿಸುವ ಜಾಲ ಲೋಮನಾಳಗಳ ಜಾಲ
(iv) ಹೃದಯದ ಲಯಬದ್ಧ ಸಂಕುಚನ ಮತ್ತು ವಿಕಸನವನ್ನು ಹೃದಯದ ಬಡಿತ ಎನ್ನುವರು.
(v) ಮಾನವರಲ್ಲಿ ಮುಖ್ಯವಾದ ತ್ಯಾಜ್ಯ ಉತ್ಪನ್ನ ಯೂರಿಯಾ
(vi) ಬೆವರಿನಲ್ಲಿರುವುದು ನೀರು ಮತ್ತು ಲವಣಗಳು
(vi) ಮೂತ್ರಜನಕಾಂಗಗಳು ತ್ಯಾಜ್ಯಪದಾರ್ಥಗಳನ್ನು ಹೊರಹಾಕುವ ದ್ರವಕ್ಕೆ – ಮೂತ್ರ ಎನ್ನುವರು.
(viii) ಮರಗಳಲ್ಲಿ ನೀರು ಹೆಚ್ಚು ಎತ್ತರಕ್ಕೆ ತಲುಪುವಂತೆ ಮಾಡುವ ಮೇಲ್ಮುಖ ಸೆಳೆತವನ್ನು ಉಂಟುಮಾಡುವ ಕ್ರಿಯೆ ಭಾಷ್ಪ ವಿಸರ್ಜನೆ
3. ಸರಿಯಾದ ಉತ್ತರವನ್ನು ಆರಿಸಿ
(ಎ) ಸಸ್ಯಗಳಲ್ಲಿ ನೀರು ಇವುಗಳ ಮೂಲಕ ಸಾಗಿಸಲ್ಪಡುತ್ತದೆ.
(i)ಕ್ಸೈಲಂ
(iii) ಪತ್ರರಂದ್ರ
(ii) ಪೋಯಮ್
(iv) ಬೇರು ರೋಮ
ಉತ್ತರ
(i)ಕ್ಸೈಲಂ
(ಬಿ) ಸಸ್ಯಗಳನ್ನು ಇಲ್ಲಿ ಇಡುವುದರ ಮೂಲಕ ಬೇರುಗಳಿಂದ ನೀರಿನ ಹೀರುವಿಕೆಯನ್ನು ಹೆಚ್ಚಿಸಬಹುದು.
(i) ನೆರಳಿನಲ್ಲಿ
(ii) ಮಂದ ಬೆಳಕಿನಲ್ಲಿ
(iii) ಫ್ಯಾನ್‌ನ ಅಡಿಯಲ್ಲಿ
(iv) ಪಾಲಿಥೀನ್ ಚೀಲವನ್ನು ಸುತ್ತಿ.
ಉತ್ತರ
(iii) ಫ್ಯಾನ್‌ನ ಅಡಿಯಲ್ಲಿ
4. ಸಸ್ಯ ಅಥವಾ ಪ್ರಾಣಿಯಲ್ಲಿ ಪದಾರ್ಥಗಳ ಸಾಗಾಣಿಕೆ ಏಕೆ ಅವಶ್ಯಕ? ವಿವರಿಸಿ.
ಜೀವಿಗಳು ಬದುಕಲು ಆಹಾರ, ನೀರು ಮತ್ತು ಆಕ್ಸಿಜನ್ ಅತ್ಯಗತ್ಯ . ಇವೆಲ್ಲವುಗಳನ್ನು ದೇಹದ ವಿವಿಧ ಭಾಗಗಳಿಗೆ ತಲುಪಿಸುವ ಅಗತ್ಯ ಜೀವಿಗಳಿಗಿದೆ. ಜೊತೆಗೆ ತ್ಯಾಜ್ಯಗಳನ್ನು ಅವು ಹೊರಹಾಕುವ ಭಾಗಗಳಿಗೆ ತಲುಪಿಸಬೇಕಾದ ಅಗತ್ಯ ಸಸ್ಯ ಮತ್ತು ಪ್ರಾಣಿಗಳಿಗಿದೆ.
ಈ ಕಾರ್ಯವನ್ನು ಮಾಡಲು ಪ್ರಾಣಿಯಲ್ಲಿ ಸಾಗಾಣಿಕೆಯ ಅಗತ್ಯವಿದೆ.
5. ರಕ್ತದಲ್ಲಿ ಕಿರುತಟ್ಟೆಗಳಿಲ್ಲದಿದ್ದರೆ ಏನಾಗುತ್ತಿತ್ತು?
ಕಿರು ತಟ್ಟೆಗಳು ರಕ್ತ ಹೆಪ್ಪು ಗಟ್ಟಲು ಸಹಾಯ ಮಾಡುತ್ತವೆ. ನಮಗೆ ಗಾಯಗಳಾದಾಗ ರಕ್ತವು ಸುರಿಯಲಾರಂಭಿಸಿ ಅದು ನಿಲ್ಲಲು ಹೊರಗೆ ಬಂದ ರಕ್ತವು ಹೆಪ್ಪು ಗಟ್ಟಬೇಕು ಆಗ ಮಾತ್ರ ರಕ್ತ ಸೋರುವುದು ನಿಲ್ಲುತ್ತದೆ. ರಕ್ತದಲ್ಲಿ ಕಿರು ತಟ್ಟೆಗಳು ಇಲ್ಲದಿದ್ದರೆ ಹೊರಬಂದ ರಕ್ತ ಹೆಪ್ಪುಗಟ್ಟದೆ ಹೆಚ್ಚು ರಕ್ತಸ್ರಾವವಾಗಿ ಮನುಷ್ಯರಿಗೆ ತೊಂದರೆಗಳು ಉಂಟಾಗುತ್ತವೆ.
6. ಪತ್ರರಂಧ್ರಗಳು ಎಂದರೇನು? ಪತ್ರರಂಧ್ರಗಳ ಎರಡು ಕಾರ್ಯಗಳನ್ನು ತಿಳಿಸಿ.
ಪತ್ರರಂಧ್ರ ಗಳು ಎಲೆಯ ಮೇಲ್ಮೈಯಲ್ಲಿ ಇರುವ ಸಣ್ಣ ರಂಧ್ರಗಳಾಗಿವೆ.
ಪತ್ರರಂಧ್ರಗಳ ಕಾರ್ಯಗಳು:
(ಎ) ಪತ್ರರಂಧ್ರಗಳು ಅನಿಲಗಳ ವಿನಿಮಯದಲ್ಲಿ ಸಹಾಯ ಮಾಡುತ್ತವೆ.
(b) ಎಲೆಯ ಮೇಲ್ಮೈಯಿಂದ ನೀರಿನ ಆವಿಯಾಗುವಿಕೆಯು ಪತ್ರರಂಧ್ರಗಳ ಮೂಲಕ ನಡೆಯುತ್ತದೆ.
7. ಬಾಷ್ಪವಿಸರ್ಜನೆಯು ಸಸ್ಯಗಳಲ್ಲಿ ಯಾವುದಾದರೂ ಉಪಯುಕ್ತ ಕಾರ್ಯವನ್ನು. ನಿರ್ವಹಿಸುತ್ತದೆಯೆ? ವಿವರಿಸಿ.
ಎಲೆಗಳಿಂದಾದ ನೀರಿನ ಆವೀಕರಣವು ಮೇಲ್ಮುಖ ಸೆಳೆತವನ್ನು (ನೀವು ನೀರನ್ನು ಸ್ಟ್ರಾ ಮೂಲಕ ಎಳೆದಾಗ ಉತ್ಪತ್ತಿಯಾಗುವಂತೆ) ಉತ್ಪತ್ತಿ ಮಾಡುತ್ತದೆ. ಈ ಮೇಲ್ಮುಖ ಸೆಳೆತವು ಎತ್ತರದ ಮರಗಳಲ್ಲಿ ಹೆಚ್ಚು ಎತ್ತರಗಳಿಗೆ ನೀರನ್ನು ಎಳೆಯಬಲ್ಲದು. ಬಾಷ್ಪವಿಸರ್ಜನೆಯು ಸಸ್ಯವನ್ನು ತಂಪಾಗಿ ಕೂಡಾ ಇಡುತ್ತದೆ.
ಜೊತೆಗೆ ಭೂಮಿಯಲ್ಲಿನ ನೀರಿನ ಅಂಶದಿಂದ ಎಲ್ಲಾ ಪ್ರಾಣಿ ಎಲ್ಲಾ ಪಕ್ಷಿಗಳಿಗೆ ಮಾನವರಿಗೆ ತಂಪಾದ ನೀರಿನ ತಂಪಾದ ಸಿಂಚನವನ್ನು ಸಸ್ಯಗಳು ಒದಗಿಸುತ್ತವೆ. ಭೂಮಿಯನ್ನು ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳುತ್ತದೆ. ಗಾಳಿಯಲ್ಲಿ ನೀರಾವಿಯ ಅಂಶವನ್ನು ಹಿಡಿದು ಇಡುತ್ತದೆ ಮತ್ತು ಮೋಡಗಳು ಉಂಟಾಗಲು ಸಹಕರಿಸುತ್ತದೆ.
8. ರಕ್ತದ ಘಟಕಗಳು ಯಾವುವು?
ರಕ್ತವು ಪ್ಲಾಸ್ಮಾ, ಕೆಂಪು ರಕ್ತಕಣ, ಬಿಳಿ ರಕ್ತಕಣ ಮತ್ತು ಕಿರುತಟ್ಟೆಗಳನ್ನು ಒಳಗೊಂಡಿದೆ.
9. ದೇಹದ ಎಲ್ಲಾ ಭಾಗಗಳಿಗೂ ರಕ್ತದ ಅಗತ್ಯ ಇದೆ. ಏಕೆ?
ದೇಹದಲ್ಲಿ ಪರಿಚಲನೆಗೊಳ್ಳುತ್ತಿರುವ ರಕ್ತವು ಬಹಳಷ್ಟು ಪ್ರಾಣಿಗಳಲ್ಲಿ ಆಹಾರ ಮತ್ತು ಆಕ್ಸಿಜನ್ ಅನ್ನು ದೇಹದ ವಿವಿಧ ಜೀವಕೋಶಗಳಿಗೆ ವಿತರಿಸುತ್ತದೆ. ತ್ಯಾಜ್ಯ ಪದಾರ್ಥಗಳನ್ನು ಕೂಡ ದೇಹದ ವಿವಿಧ ಭಾಗಗಳಿಂದ ವಿಸರ್ಜನೆಗೆ ಅದು ಕೊಂಡೊಯ್ಯುತ್ತದೆ. ಆದುದರಿಂದ ದೇಹದ ಎಲ್ಲಾ ಭಾಗಗಳಿಗೂ ರಕ್ತದ ಅಗತ್ಯ ಇದೆ.
10. ರಕ್ತವನ್ನು ಕೆಂಪಾಗಿ ಕಾಣುವಂತೆ ಮಾಡುವುದು ಯಾವುದು?
ಹಿಮೋಗ್ಲೋಬಿನ್ ಎಂಬ ಕೆಂಪುವರ್ಣಕ ಇರುವುದರಿಂದ ರಕ್ತವು ಕೆಂಪು ಬಣ್ಣದಲ್ಲಿದೆ.
11. ಹೃದಯದ ಕಾರ್ಯವನ್ನು ವಿವರಿಸಿ.
ಇತರ ಪದಾರ್ಥಗಳನ್ನು ತನ್ನೊಂದಿಗೆ ಕೊಂಡೊಯ್ಯುವ ರಕ್ತದ ಸಾಗಾಣಿಕೆಗೆ ಪಂಪ್‌ನಂತೆ ವರ್ತಿಸುತ್ತ ನಿರಂತರವಾಗಿ ಬಡಿದುಕೊಳ್ಳುವ ಅಂಗವೇ ಹೃದಯ.ಹೃದಯವು ತಡೆರಹಿತ ಪಂಪಿನಂತೆ ಕೆಲಸ ಮಾಡುತ್ತದೆ.
ಅಭಿಧಮನಿಗಳ ಮೂಲಕ ದೇಹದ ವಿವಿಧ ಭಾಗಗಳಿಂದ ಬರುವ ಅಶುದ್ಧ ರಕ್ತವನ್ನು ಸ್ವೀಕರಿಸಿ ಶ್ವಾಸಕೋಶಗಳಿಗೆ ಪಂಪು ಮಾಡುತ್ತದೆ. ಶ್ವಾಸಕೋಶಗಳಿಂದ ಬಂದ ಶುದ್ಧ ರಕ್ತವನ್ನು ಸ್ವೀಕರಿಸಿ ಅಪಧಮನಿಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಒತ್ತಿ ತಳ್ಳುತ್ತದೆ. ಈ ಕೆಲಸವನ್ನು ಹೃದಯವು ಮಾನವನ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಮಾಡುತ್ತದೆ.
12, ತ್ಯಾಜ್ಯ ಉತ್ಪನ್ನಗಳನ್ನು ವಿಸರ್ಜಿಸುವ ಅವಶ್ಯಕತೆ ಏಕಿದೆ?
ನಮ್ಮ ಜೀವಕೋಶಗಳ ಕಾರ್ಯನಿರ್ವಹಣೆಯಲ್ಲಿ ನಿರ್ದಿಷ್ಟವಾದ ಕೆಲವು ತ್ಯಾಜ್ಯ ಉತ್ಪನ್ನಗಳು ಬಿಡುಗಡೆಯಾಗುತ್ತವೆ. ಇವು ವಿಷವಸ್ತುಗಳು. ಈ ವಿಷ ತ್ಯಾಜ್ಯ ವಸ್ತುಗಳನ್ನು ಹೊರ ತೆಗೆಯದಿದ್ದರೆ ನಾವು ಬದುಕುಳಿಯಲಾರೆವು. ಆದುದರಿಂದ ದೇಹದಿಂದ ಇವುಗಳನ್ನು ಅಗತ್ಯವಾಗಿ ಹೊರ ತೆಗೆಯಬೇಕು.
13. ಮಾನವನ ವಿಸರ್ಜನಾಂಗವ್ಯೂಹದ ಚಿತ್ರ ಬಿಡಿಸಿ ಮತ್ತು ಭಾಗಗಳನ್ನು ಗುರ್ತಿಸಿ.
ಏಳನೇ ತರಗತಿ ವಿಜ್ಞಾನ ಭಾಗ-2
ಅಧ್ಯಾಯ 12
<span;>ಸಸ್ಯಗಳಲ್ಲಿ ಸಂತಾನೋತ್ಪತ್ತಿ
ನೋಟ್ಸ್ ಪ್ರಶ್ನೋತ್ತರಗಳು
1. ಬಿಟ್ಟ ಜಾಗವನ್ನು ತುಂಬಿ
(ಎ) ಪೋಷಕ ಸಸ್ಯದ ಕಾಯಿಕ ಭಾಗದಿಂದ ಹೊಸ ಜೀವಿಯು ಉತ್ಪತ್ತಿಯಾಗುವುದಕ್ಕೆ ಕಾಯಜ ಸಂತಾನೋತ್ಪತ್ತಿ ಎನ್ನುವರು.
(ಬಿ) ಒಂದು ಹೂವು ಗಂಡು ಅಥವಾ ಹೆಣ್ಣು ಪ್ರಜನನ ಭಾಗವನ್ನು ಹೊಂದಿರಬಹುದು. ಅಂತಹ ಹೂವಿಗೆ ಏಕಲಿಂಗಿ ಹೂವು
ಎನ್ನುವರು.
(ಸಿ) ಒಂದು ಹೂವಿನ ಪರಾಗಕೋಶದಿಂದ ಅದೇ ಹೂವಿನ ಅಥವಾ ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆಗೆ ಸ್ವಕೀಯ ಪರಾಗಸ್ಪರ್ಶ ಎನ್ನುವರು.
(ಡಿ) ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣುವಿನ ಸಂಯೋಗಕ್ಕೆ ನಿಷೇಚನ ಎನ್ನುವರು.
(ಇ) ಬೀಜ ಪ್ರಸರಣವು ಗಾಳಿ, ನೀರು ಮತ್ತು ಪ್ರಾಣಿಗಳ ಮೂಲಕ ಜರುಗುತ್ತದೆ.
2 ಅಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳನ್ನು ವಿವರಿಸಿ. ಉದಾಹರಣೆಗಳನ್ನು ನೀಡಿ.
ಅಲೈಂಗಿಕ ಸಂತಾನೋತ್ಪತ್ತಿ (asexual reproduction) ಯಲ್ಲಿ ಬೀಜಗಳ ಉತ್ಪತ್ತಿ ಇಲ್ಲದೆ ಹೊಸ ಸಸ್ಯಗಳು ಹುಟ್ಟುತ್ತವೆ.
ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ತುಂಡಾಗುವಿಕೆ, ಮೊಗ್ಗುವಿಕೆ, ಬೀಜಕ ಉತ್ಪತ್ತಿ ಮತ್ತು ಕಾಯಜ ಸಂತಾನೋತ್ಪತ್ತಿಯಂಥ ಹಲವಾರು ವಿಧಾನಗಳಿವೆ.
ಕಾಯಜ ಸಂತಾನೋತ್ಪತ್ತಿ
ಇದರಲ್ಲಿ ಬೇರು, ಕಾಂಡ, ಎಲೆ ಮತ್ತು ಮೊಗ್ಗುಗಳಿಂದ ಹೊಸಗಿಡಗಳು ಹುಟ್ಟುತ್ತವೆ. ಸಸ್ಯದ ಕಾಯಜ ಭಾಗಗಳಿಂದ ಹೊಸ ಸಸ್ಯಗಳು ಹುಟ್ಟುವ ಕಾರಣ, ಈ ವಿಧಾನಕ್ಕೆ ಕಾಯಜ ಸಂತಾನೋತ್ಪತ್ತಿ (vegetative propagation) ಎನ್ನುವರು.
ಉದಾಹರಣೆ ಗುಲಾಬಿ ಗಿಡ, ಆಲೂಗಡ್ಡೆ ,ಅರಿಶಿಣ, ಶುಂಠಿ ಇವುಗಳ ಕಾಂಡಗಳನ್ನು ಮಣ್ಣಿನಲ್ಲಿ ನೆಟ್ಟರೆ ಹೊಸ ಗಿಡಗಳು ಬೆಳೆಯುತ್ತವೆ. ಬ್ರಯೋ ಫಿಲಂ ಎಲೆಗಳಿಂದ ಹೊಸ ಗಿಡಗಳು ಹುಟ್ಟುತ್ತವೆ.
ಮೊಗ್ಗುವಿಕೆ: ಯೀಸ್ಟ್ ಕೋಶದ ಮೇಲ್ಮೈಯಿಂದ ಹೊರಚಾಚುವ ಸಣ್ಣ ಗಂಟಿನಾಕಾರದ ಬೆಳವಣಿಗೆಗೆ ಮೊಗ್ಗು (bud) ಎನ್ನುವರು. ಈ ಮೊಗ್ಗು ನಿಧಾನವಾಗಿ ಬೆಳೆದು ತಾಯಿ ಕೋಶದಿಂದ ಬೇರ್ಪಡುತ್ತದೆ ಮತ್ತು ಹೊಸ ಯೀಸ್ಟ್ ಕೋಶವಾಗಿ ಬೆಳೆಯುತ್ತದೆ. ಹೊಸ ಯೀಸ್ಟ್ ಬೆಳೆದು, ಪ್ರೌಢಾವಸ್ಥೆಯನ್ನು ತಲುಪಿ ಹೆಚ್ಚಿನ ಯೀಸ್ಟ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ.
ತುಂಡಾಗುವಿಕೆ
ಒಂದು ಶೈವಲ ಪೋಷಕಗಳು ಮತ್ತು ನೀರು ದೊರಕಿದಾಗ ಶೀಘ್ರವಾಗಿ ಬೆಳೆದು ಎರಡು ಅಥವಾ ಹೆಚ್ಚು ತುಂಡುಗಳಾಗುತ್ತದೆ. ಈ ತುಂಡುಗಳು ಹೊಸ ಜೀವಿಗಳಾಗಿ ಬೆಳೆಯುತ್ತವೆ. ಮುಂದುವರೆದು ಅಲ್ಪಾವಧಿಯಲ್ಲಿಯೆ ವಿಸ್ತಾರವಾದ ಪ್ರದೇಶವನ್ನು ಇವು ಆವರಿಸಿಕೊಂಡು ಬಿಡುತ್ತವೆ.
ನಿಂತಿರುವ ನೀರಿನಲ್ಲಿ ಅಥವಾ ಕೊಳದಲ್ಲಿ ಅಂಟಾದ ಹಸಿರು ತೇಪೆ (patch)ಗಳೇ ಶೈವಲಗಳು (algae),
(iv) ಬೀಜಕ ರಚನೆ: ಅನೇಕ ಹೂಬಿಡುವ ಸಸ್ಯಗಳು ಬೀಜಕ ರಚನೆಯ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಬೀಜಕಗಳು ದಪ್ಪ ಗೋಡೆಯಿಂದ ರಕ್ಷಿಸಲ್ಪಟ್ಟ ಸಣ್ಣ ಕೋಶಗಳಾಗಿವೆ.
ಬ್ರೆಡ್ ಅಚ್ಚುಗಳಂತಹ ಶಿಲೀಂಧ್ರಗಳು ಈ ವಿಧಾನವನ್ನು ಬಳಸಿಕೊಂಡು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತವೆ.
3. ಲೈಂಗಿಕ ಸಂತಾನೋತ್ಪತ್ತಿಯ ಬಗ್ಗೆ ನೀವು ಏನು ಅರ್ಥ ಮಾಡಿಕೊಂಡಿರಿ? ವಿವರಿಸಿ.
ಲೈಂಗಿಕ ಸಂತಾನೋತ್ಪತ್ತಿಯು ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ಒಳಗೊಂಡಿರುತ್ತದೆ. ಎರಡು ಪೋಷಕ ಜೀವಿಗಳು ಸಂಯೋಗ ಹೊಂದಿ ಹೊಸ ಜೀವಿಯ ಜನ್ಮವಾಗುತ್ತದೆ.
ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳ ಮೂಲಕ ಹೊಸ ಸಸ್ಯಗಳನ್ನು ಪಡೆಯಬಹುದು.ಸಸ್ಯದ ಲೈಂಗಿಕ ಸಂತಾನೋತ್ಪತ್ತಿಯ ಭಾಗ ಹೂಗಳು. ಕೇಸರಗಳು (stamens) ಪುರುಷ ಪ್ರಜನನ ಭಾಗ ಹಾಗೂ ಶಲಾಕೆ (pistil) ಹೆಣ್ಣು ಪ್ರಜನನ ಭಾಗವಾಗಿದೆ.ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಪುರುಷ ಮತ್ತು ಹೆಣ್ಣು ಲಿಂಗಾಣುಗಳು ಸಂಯೋಗಗೊಂಡು ಯುಗ್ಮಜ (Zygote) ವಾಗುತ್ತದೆ.
4. ಲೈಂಗಿಕ ಮತ್ತು ಅಲೈಂಗಿಕ ಸಂತಾನೋತ್ಪತ್ತಿಯ ನಡುವೆ ಇರುವ ಮುಖ್ಯ ವ್ಯತ್ಯಾಸವನ್ನು ತಿಳಿಸಿ.
ಅಲೈಂಗಿಕ ಸಂತಾನೋತ್ಪತ್ತಿ
ಈ ಕ್ರಿಯೆ ನಡೆಯಲು ಒಂದು ಪೋಷಕ ಜೀವಿ ಸಾಕು.
ಹುಟ್ಟಿದ ಹೊಸ ಸಸ್ಯಗಳು ಪೋಷಕ ಸಸ್ಯ ಗಳ ತದ್ರೂಪಿಗಳಾಗಿರುತ್ತವೆ.ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳ ಉತ್ಪತ್ತಿ ಇಲ್ಲದೆ ಹೊಸ ಸಸ್ಯಗಳು ಹುಟ್ಟುತ್ತವೆ. ಸಂತಾನೋತ್ಪತ್ತಿಗಾಗಿ ವಿಶೇಷವಾದ ಅಂಗಗಳು ಇರುವುದಿಲ್ಲ. ಉದಾಹರಣೆಗಳು ಯೀಸ್ಟ್, ಗುಲಾಬಿ ಗಿಡ, ದಾಸವಾಳ ಗಿಡ, ಶಿಲೀಂಧ್ರಗಳು, ಬ್ರಯೋಫಿಲಂ ಗಿಡ
ಲೈಂಗಿಕ ಸಂತಾನೋತ್ಪತ್ತಿ
ಈ ಕ್ರಿಯೆ ನಡೆಯಲು ಗಂಡು ಮತ್ತು ಹೆಣ್ಣುಗಳೆಂಬ ಎರಡು ಪೋಷಕ ಜೀವಿಗಳು ಬೇಕು.ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬೀಜಗಳ ಮೂಲಕ ಹೊಸ ಸಸ್ಯಗಳನ್ನು ಪಡೆಯಬಹುದು.ಹೂವು ಸಸ್ಯದ ಸಂತಾನೋತ್ಪತ್ತಿಯ ಭಾಗವಾಗಿದೆ. ಉದಾಹರಣೆ:ಹುಣಸೆ ಮರ, ಬೇವಿನಮರ ,ರಾಗಿ ಗಿಡ.
5. ಹೂವಿನ ಪ್ರಜನನ ಭಾಗಗಳನ್ನು ಚಿತ್ರಿಸಿ.
6. ಸ್ವಕೀಯ ಪರಾಗಸ್ಪರ್ಶ ಹಾಗೂ ಪರಕೀಯ ಪರಾಗಸ್ಪರ್ಶದ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿ.
ಸ್ವಕೀಯ ಪರಾಗಸ್ಪರ್ಶದಲ್ಲಿ ಒಂದು ಹೂವಿನ ಪರಾಗಕೋಶದಿಂದ ಅದೇ ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆ ಆಗುತ್ತದೆ.
ಪರಕೀಯ ಪರಾಗಸ್ಪರ್ಶದಲ್ಲಿ ಒಂದು ಹೂವಿನ ಪರಾಗಕೋಶದಿಂದ ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರಕ್ಕೆ ಪರಾಗದ ವರ್ಗಾವಣೆ ಆಗುತ್ತದೆ.
7. ಹೂಗಳಲ್ಲಿ ನಿಷೇಚನ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಯುಗ್ಮಜವನ್ನುಂಟು ಮಾಡಲು ಪುರುಷ ಲಿಂಗಾಣು ಮತ್ತು ಹೆಣ್ಣು ಲಿಂಗಾಣು ಸಂಯೋಗಗೊಳ್ಳುವ ಪ್ರಕ್ರಿಯೆಗೆ ನಿಷೇಚನ (fertilisation) ಎನ್ನುವರು.
ಹೂವಿನ ಕೇಸರದಲ್ಲಿನ ಪರಾಗರೇಣು ಶಲಾಕಾಗ್ರವನ್ನು ತಲುಪಿ, ಪರಾಗ ನಳಿಕೆಯನ್ನು ಉಂಟುಮಾಡಿ. ಈ ನಳಿಕೆಯು ಶಲಾಕ ನಳಿಕೆಯ ಮೂಲಕ ಅಂಡಾಶಯವನ್ನು ತಲುಪಿ ಅಂಡಕವನ್ನು ಸೇರುತ್ತದೆ. ಈ ನಳಿಕೆಯ ಮೂಲಕ ಪರಾಗವು ತನ್ನ ಗಂಡುಲಿಂಗಾಣುಗಳನ್ನು ಅಂಡಕದಲ್ಲಿರುವ ಹೆಣ್ಣು ಲಿಂಗಾಣುಗಳೊಡನೆ ಸಂಯೋಜಿಸುತ್ತದೆ. ಯುಗ್ಮಜ ಉಂಟಾಗುತ್ತದೆ. ಈ ಕ್ರಿಯೆಯೇ ನಿಷೇಚನ ಕ್ರಿಯೆ.
8. ಬೀಜ ಪ್ರಸರಣವಾಗುವ ಹಲವು ವಿಧಾನಗಳನ್ನು ವಿವರಿಸಿ.
ಗಾಳಿ, ನೀರು ಮತ್ತು ಪ್ರಾಣಿಗಳಿಂದ ಬೀಜ ಮತ್ತು ಹಣ್ಣುಗಳು ವಿವಿಧ ಪ್ರದೇಶಗಳಿಗೆ ಸಾಗಿಸಲ್ಪಡುತ್ತವೆ.
ರೆಕ್ಕೆಯಂತೆ ಚಾಚಿರುವ ಹೊರಪದರು ಇರುವ ನುಗ್ಗೆಕಾಯಿ ಮತ್ತು ಮೇಪಲ್‌ನ ಬೀಜಗಳು, ಹುಲ್ಲಿನ ಹಗುರ ಬೀಜಗಳು, ಆಕ್‌ನ ರೋಮಭರಿತ ಬೀಜಗಳು ಅಥವಾ ಸೂರ್ಯಕಾಂತಿಯ ರೋಮಭರಿತ ಹಣ್ಣು , ಗಾಳಿಗೆ ಬಹಳ ದೂರ ಚದುರಿ ಹೋಗುತ್ತವೆ.
ಕೆಲವು ನೀರಿನಿಂದ ಪ್ರಸರಣಗೊಳ್ಳುತ್ತವೆ. ಕೆಲವು ಹಣ್ಣು ಅಥವಾ ಬೀಜಗಳು ನಾರುಭರಿತ ಅಥವಾ ಮೃದುವಾದ ಹೊರಪದರದ ಮೂಲಕ ನೀರಿನಲ್ಲಿ ತೇಲುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ. ಉದಾಹರಣೆಗೆ, ತೆಂಗಿನಕಾಯಿ.
ಕೆಲವು ಬೀಜಗಳು ವಿಶೇಷವಾಗಿ ಮೈಮೇಲೆ ಮುಳ್ಳು, ಕೊಕ್ಕೆ ಅಥವಾ ಕೊಂಡಿಯಂಥ ರಚನೆ ಇರುವಂಥ ಬೀಜಗಳು. ಪ್ರಾಣಿಗಳಿಂದ ಪ್ರಸರಣಗೊಳ್ಳುತ್ತವೆ. ಇವು ಪ್ರಾಣಿಗಳ ದೇಹಕ್ಕೆ ಅಂಟಿಕೊಂಡು ದೂರದ ಪ್ರದೇಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಉದಾಹರಣೆಗೆ, ಕ್ಸಾಂತಿಯಮ್ ಮತ್ತು ಯುರೀನ.
ಕೆಲವು ಜಾತಿಯ ಹಣ್ಣುಗಳು ಇದ್ದಕ್ಕಿದ್ದಂತೆ ಸಿಡಿದು ಬೀಜಗಳನ್ನು ದೂರಕ್ಕೆ ಎಸೆಯುತ್ತವೆ. ಹೀಗಾಗಿ ಪೋಷಕ ಸಸ್ಯದಿಂದ ಬಹು ದೂರಕ್ಕೆ ಬೀಜಗಳು ಚದುರುತ್ತವೆ. ಈ ವಿಧಾನವನ್ನು ಹರಳು ಮತ್ತು ಕರ್ಣಕುಂಡಲದಲ್ಲಿ ಕಾಣಬಹುದು.
9. ಕಾಲಂ – 1ರಲ್ಲಿ ಕೊಟ್ಟಿರುವ ಅಂಶಗಳನ್ನು ಕಾಲಂ – IIರಲ್ಲಿ ಕೊಟ್ಟಿರುವ ಸೂಕ್ತ ಅಂಶಗಳೊಂದಿಗೆ ಹೊಂದಿಸಿ
(ಎ) ಮೊಗ್ಗು…… ……………. ಯೀಸ್ಟ್
(ಬಿ) ಕಣ್ಣುಗಳು……………….. ಆಲೂಗಡ್ಡೆ
(ಸಿ) ತುಂಡಾಗುವಿಕೆ……………. ಸ್ಪೈರೊಗೈರ
(ಡಿ) ಬೀಜರೆಕ್ಕೆಗಳು…………….. ಮೇಪಲ್
(ಇ) ಬೀಜಕಗಳು……………. ಬ್ರೆಡ್ಡಿನ ಶಿಲೀಂಧ್ರ
10. ಸರಿಯಾದ ಉತ್ತರವನ್ನು ✓ಚಿಹ್ನೆಯಿಂದ ಗುರುತಿಸಿ.
(ಎ) ಒಂದು ಸಸ್ಯದ ಪ್ರಜನನ ಭಾಗ
(i) ಎಲೆ (ii) ಕಾಂಡ (iii) ಬೇರು (iv) ಹೂವು
ಉತ್ತರ
(iv) ಹೂವು
(ಬಿ) ಪುರುಷ ಲಿಂಗಾಣು, ಮತ್ತು ಹೆಣ್ಣು ಲಿಂಗಾಣು ಸಂಯೋಗಗೊಳ್ಳುವ ಪ್ರಕ್ರಿಯೆಯನ್ನು ಹೀಗೆನ್ನುವರು.
(i) ನಿಷೇಚನ (ii) ಪರಾಗಸ್ಪರ್ಶ
(iii) ಸಂತಾನೋತ್ಪತ್ತಿ (iv) ಬೀಜ ಉಂಟಾಗುವಿಕೆ.
ಉತ್ತರ
(i) ನಿಷೇಚನ
(ಸಿ) ಬಲಿತ ಅಂಡಾಶಯವು ಹೇಗೆ ಮಾರ್ಪಡುತ್ತದೆ.
(ii) ಬೀಜ. (ii) ಕೇಸರ(iii) ಶಲಾಕೆ (iv) ಹಣ್ಣು
ಉತ್ತರ
(iv) ಹಣ್ಣು
(ಡಿ)ಇದು ಬೀಜಕವನ್ನು ಉತ್ಪತ್ತಿ ಮಾಡುವ ಜೀವಿ
(i) ಗುಲಾಬಿ (ii) ಬ್ರೆಡ್ಡಿನ ಶಿಲೀಂಧ್ರ
(iii) ಆಲೂಗಡ್ಡೆ. (iv) ಶುಂಠಿ
ಉತ್ತರ
(ii) ಬ್ರೆಡ್ಡಿನ ಶಿಲೀಂಧ್ರ
(ಇ) ಬಯೊಫಿಲ್ಲಮ್ ಇದರ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ.
(1) ಕಾಂಡ (ii) ಎಲೆಗಳು (iii) ಬೇರುಗಳು (iv) ಹೂ
ಉತ್ತರ
(ii) ಎಲೆಗಳು.
7ನೇ ತರಗತಿ ವಿಜ್ಞಾನ ಭಾಗ 2
ಅಧ್ಯಾಯ 13
<span;>ಚಲನೆ ಮತ್ತು ಕಾಲ
ನೋಟ್ಸ್ ಪ್ರಶ್ನೋತ್ತರಗಳು
ಅಭ್ಯಾಸಗಳು
1. ಕೆಳಗಿನವುಗಳನ್ನು ಸರಳರೇಖಾಗತ, ವೃತ್ತೀಯ ಅಥವಾ ಆಂದೋಲನ ಚಲನೆ ಎಂದು ವರ್ಗೀಕರಿಸಿ.
(i) ಓಡುವಾಗ ನಿಮ್ಮ ಕೈಗಳ ಚಲನೆ……ಆಂದೋಲನ ಚಲನೆ
(ii) ನೇರ ರಸ್ತೆಯಲ್ಲಿ ಕುದುರೆ ಗಾಡಿಯ ಚಲನೆ…..ಸರಳರೇಖಾಗತ ಚಲನೆ
(iii) ತಿರುಗಣಿ (merri-go-round) ಆಟದಲ್ಲಿ ಮಗು…..ವೃತ್ತೀಯ ಚಲನೆ
(iv) ಐಕು – ಬೈಕು (See – saw) ಆಟದಲ್ಲಿ – ಮಗುವಿನ ಚಲನೆ………ಆಂದೋಲನ ಚಲನೆ
(v) ವಿದ್ಯುತ್ ಘಂಟೆಯಲ್ಲಿ ಸುತ್ತಿಗೆಯ ಚಲನೆ…….ಆಂದೋಲನ ಚಲನೆ
(vi) ನೇರ ಸೇತುವೆಯ ಮೇಲೆ ರೈಲಿನ ಚಲನೆ………ಸರಳರೇಖಾಗತ ಚಲನೆ.
2. ಈ ಕೆಳಗಿನವುಗಳಲ್ಲಿ ಯಾವುವು ಸರಿಯಲ್ಲ?
(1) ಕಾಲದ ಏಕಮಾನ ಸೆಕೆಂಡ್….. ಸರಿ
(ii) ಪ್ರತಿಯೊಂದು ಕಾಯವೂ ಸ್ಥಿರ ಜವದೊಂದಿಗೆ ಚಲಿಸುತ್ತದೆ…….. ತಪ್ಪು
(iii) ಎರಡು ನಗರಗಳ ನಡುವಿನ ದೂರವನ್ನು km ಗಳಲ್ಲಿ ಅಳೆಯುವರು…… ಸರಿ
(iv) ನಿರ್ದಿಷ್ಟ ಲೋಲಕದ ಆವರ್ತನಾವಧಿ ಒಂದು ಸ್ಥಿರಾಂಕ…….. ಸರಿ
(v) ರೈಲಿನ ಜವವನ್ನು m/h ನಿಂದ ವ್ಯಕ್ತಪಡಿಸುವರು…… ತಪ್ಪು
3, ಒಂದು ಸರಳ ಲೋಲಕ 20 ಆಂದೋಲನಗಳನ್ನು ಪೂರ್ಣಗೊಳಿಸಲು 32 ಸೆಕೆಂಡ್ ತೆಗೆದುಕೊಂಡರೆ ಲೋಲಕದ ಆವರ್ತನಾವಧಿ ಎಷ್ಟು?
ಲೋಲಕದ ಆವರ್ತನಾವಧಿ=
ತೆಗೆದುಕೊಂಡ ಕಾಲ/ಒಟ್ಟು ಆಂದೋಲನಗಳು
=32/20
=1.6 ಸೆಕೆಂಡ್
4. ಎರಡು ನಿಲ್ದಾಣಗಳ ನಡುವಣ ಅಂತರ 240 km . ಒಂದು ರೈಲು ಈ ದೂರವನ್ನು ಕ್ರಮಿಸಲು 4 ಗಂಟೆ ತೆಗೆದುಕೊಂಡರೆ, ರೈಲಿನ ಜವವನ್ನು ಲೆಕ್ಕ ಹಾಕಿ.
ರೈಲಿನ ಜವ= ಕ್ರಮಿಸಿದ ದೂರ/ ತೆಗೆದುಕೊಂಡ ಕಾಲ
=240/4
=60 ಕಿಲೋಮೀಟರ್ ಪ್ರತಿ ಗಂಟೆಗೆ
5. ಗಡಿಯಾರ 08:30 AM ಸಮಯವನ್ನು ತೋರಿಸುವಾಗ ಒಂದು ಕಾರಿನ ದೂರಮಾಪಕವು
57321.0 km ಆಳತೆಯನ್ನು ತೋರಿಸುತ್ತಿದೆ. ನಂತರ 08:50 AM ಸಮಯದಲ್ಲಿ ದೂರಮಾಪಕದ ಆಳತೆ 57336.0 km ಗೆ ಬದಲಾದರೆ, ನಡುವಿನ ಈ ಕಾಲದಲ್ಲಿ ಕಾರು ಚಲಿಸಿದ ದೂರವೆಷ್ಟು? ಕಾರಿನ ಜವವನ್ನು km/min ನಲ್ಲಿ ಕಂಡುಹಿಡಿಯಿರಿ, ಆ ಜವವನ್ನು km/h ನಲ್ಲಿಯೂ ವ್ಯಕ್ತಪಡಿಸಿ.
ಕಾರು ಚಲಿಸಿದ ದೂರ=57336-57321
ಕಾರು ಚಲಿಸಿದ ದೂರ=15 ಕಿಲೋಮೀಟರ್.
15 ಕಿಲೋಮೀಟರ್ ಕ್ರಮಿಸಲು ತೆಗೆದುಕೊಂಡ ಕಾಲ=8:50-8:30=20 ನಿಮಿಷಗಳು
ಕಾರಿನ ಜವ= ಕ್ರಮಿಸಿದ ದೂರ/ತೆಗೆದುಕೊಂಡ ಕಾಲ
ಕಾರಿನ ಜವ=15/20
ಕಾರಿನ ಜವ=0.75 ಕಿಲೋಮೀಟರ್ ಪ್ರತಿ ನಿಮಿಷಕ್ಕೆ
ಕಾರಿನ ಜವ= ಕ್ರಮಿಸಿದ ದೂರ /ತೆಗೆದುಕೊಂಡ ಕಾಲ
ಕಾರಿನ ಜವ=15×60/20
ಕಾರಿನ ಜವ=45 ಕಿಲೋಮಿಟರ್ ಪ್ರತಿ ಗಂಟೆಗೆ
6. ತನ್ನ ಮನೆಯಿಂದ ಬೈಸಿಕಲ್‌ನಲ್ಲಿ ಶಾಲೆಗೆ ತಲುಪಲು ಸಲ್ಮಾ 15 ನಿಮಿಷ ತೆಗೆದುಕೊಳ್ಳುತ್ತಾಳೆ. ಬೈಸಿಕಲ್‌ನ ಜವ 2m/s ಆದರೆ ಅವಳ ಮನೆ ಮತ್ತು ಶಾಲೆಯ ನಡುವಣ ದೂರವನ್ನು ಕಂಡುಹಿಡಿಯಿರಿ.
ಜವ=2m/s,
ತೆಗೆದುಕೊಂಡ ಕಾಲ=15 ನಿಮಿಷ=15×60 ಸೆಕೆಂಡ್ ,
ಕ್ರಮಿಸಿದ ದೂರ=?
ಜವ= ಕ್ರಮಿಸಿದ ದೂರ/ ತೆಗೆದುಕೊಂಡ ಕಾಲ
ಕ್ರಮಿಸಿದ ದೂರ= ಜವ x ತೆಗೆದುಕೊಂಡ ಕಾಲ
ಕ್ರಮಿಸಿದ ದೂರ=2x15x60
ಕ್ರಮಿಸಿದ ದೂರ=1800 ಮೀಟರ್ ಗಳು ಅಥವಾ 1.8 ಕಿಲೋಮೀಟರ್.
7. ಕೆಳಕಂಡ ಚಲನೆಯ ಸಂದರ್ಭಗಳಲ್ಲಿ ದೂರ – ಕಾಲ ನಕ್ಷೆಯ ಆಕಾರವನ್ನು –
(i) ಸ್ಥಿರ ಜವದೊಂದಿಗೆ ಚಲಿಸುತ್ತಿರುವ ಕಾರು
(ii) ರಸ್ತೆ ಬದಿಯಲ್ಲಿ ನಿಂತ ಕಾರು.
8. ಈ ಕೆಳಗಿನವುಗಳಲ್ಲಿ ಯಾವುದು ಸರಿಯಿದೆ.
(i) ಜವ = ದೂರ xಕಾಲ
(ii) ಜವ=ಚಲಿಸಿದ ಒಟ್ಟು ದೂರ /ತೆಗೆದುಕೊಂಡ ಒಟ್ಟುಕಾಲ
(iii) ಜವ = ತೆಗೆದುಕೊಂಡ ಒಟ್ಟು ಕಾಲ/ ಚಲಿಸಿದ ಒಟ್ಟು ದೂರ
(iv) ಜವ=1/ದೂರ x ಕಾಲ
ಉತ್ತರ
(ii) ಜವ=ಚಲಿಸಿದ ಒಟ್ಟು ದೂರ /ತೆಗೆದುಕೊಂಡ ಒಟ್ಟುಕಾಲ
9, ಜವದ ಏಕಮಾನ
(i) km/min (ii) m/min
(iii) km/h (iv) m/s
ಉತ್ತರ
(iv) m/s
10. ಒಂದು ಕಾರು 15 ನಿಮಿಷಗಳವರೆಗೆ 40 km/h ಜವದೊಂದಿಗೆ, ಮತ್ತೆ 15 ನಿಮಿಷಗಳವರೆಗೆ 60 km/h ಜನದೊಂದಿಗೆ ಚಲಿಸಿದರೆ ಕಾರು ಕ್ರಮಿಸಿದ ಒಟ್ಟು ದೂರ
(i) 100 km
(ii)25 km
(iii) 15 km
(iv) 10 km
ಉತ್ತರ
(ii)25 km
11. ಚಿತ್ರ 13.1 ಮತ್ತು 13.2 ರಲ್ಲಿನ ಛಾಯಾಚಿತ್ರಗಳನ್ನು 10 ನಿಮಿಷ ಕಾಲದ ಅಂತರದಲ್ಲಿ ತೆಗೆಯಲಾಗಿದೆ ಎಂದು ಊಹಿಸಿಕೊಳ್ಳಿ. ಈ ಚಿತ್ರಗಳಲ್ಲಿ 100 ಮೀಟರ್ ದೂರವನ್ನು 1 cm ನಿಂದ ತೋರಿಸಿದರೆ, ತೀವ್ರಗತಿಯ ಕಾರಿನ ಜವವನ್ನು ಲೆಕ್ಕ ಹಾಕಿ.
12, A ಮತ್ತು B ಎರಡು ವಾಹನಗಳ ಚಲನೆಯ ದೂರ-ಕಾಲ ನಕ್ಷೆಯನ್ನು ಚಿತ್ರ 13.15 ತೋರಿಸುತ್ತದೆ. ಇವುಗಳಲ್ಲಿ ಯಾವ ಕಾರು ಹೆಚ್ಚು ಜವದಿಂದ ಚಲಿಸುತ್ತಿದೆ?
ಉತ್ತರ
A ಕಾರು
13, ಕೆಳಗಿನ ದೂರ-ಕಾಲ ನಕ್ಷೆಗಳಲ್ಲಿ ಯಾವುದು ಸ್ಥಿರವಲ್ಲದ ಜವದೊಂದಿಗೆ ಚಲಿಸುತ್ತಿರುವ ಟ್ರಕ್‌ನ ಚಲನೆಯನ್ನು ತೋರಿಸುತ್ತದೆ.?
ಉತ್ತರ
(iii)ನೆಯ ಚಿತ್ರ.
ಏಳನೇ ತರಗತಿ ವಿಜ್ಞಾನ ಭಾಗ 2
ಅಧ್ಯಾಯ 14
<span;>ವಿದ್ಯುತ್ ಪ್ರವಾಹ ಮತ್ತು ಪರಿಣಾಮಗಳು
ನೋಟ್ಸ್ ಪ್ರಶ್ನೋತ್ತರಗಳು
1. ನಿಮ್ಮ ನೋಟ್ ಪುಸ್ತಕದಲ್ಲಿ ವಿದ್ಯುತ್ ಮಂಡಲದ ಕೆಳಕಂಡ ಸಲಕರಣೆಗಳನ್ನು ಪ್ರತಿನಿಧಿಸುವ ಸಂಕೇತಗಳನ್ನು ಬರೆಯಿರಿ :ಸಂಪರ್ಕ ತಂತಿಗಳು, ಸಂಪರ್ಕರಹಿತ ಸ್ಥಿತಿಯ ಒತ್ತುಗುಂಡಿ, ಬಲ್ಬ್, ವಿದ್ಯುತ್ ಕೋಶ, ಸಂಪರ್ಕಸ್ಥಿತಿಯ ಒತ್ತುಗುಂಡಿ ಮತ್ತು ಬ್ಯಾಟರಿ.
2. ಚಿತ್ರ 14.21 ರಲ್ಲಿ ತೋರಿಸಿದಂತೆ ವಿದ್ಯುತ್ ಮಂಡಲವನ್ನು ಪ್ರತಿನಿಧಿಸುವ ಮಂಡಲ ನಕ್ಷೆಯನ್ನು ಬರೆಯಿರಿ.
3. ಚಿತ್ರ 14,22 ರಲ್ಲಿ ಹಲಗೆಯ ಮೇಲೆ ಇಟ್ಟಿರುವ ನಾಲ್ಕು ವಿದ್ಯುತ್ ಕೋಶಗಳನ್ನು ತೋರಿಸಿದೆ. ನಾಲ್ಕು ಕೋಶಗಳ ಬ್ಯಾಟರಿ ತಯಾರಿಸಲು ಕೋಶಗಳ ವಿದ್ಯುದಾಗ್ರಗಳನ್ನು ತಂತಿಗಳಿಂದ ಹೇಗೆ ಜೋಡಿಸುವಿರಂದು ತೋರಿಸುವ ಗೆರೆಗಳನ್ನು ಎಳೆಯಿರಿ.
4. ಚಿತ್ರ 14.23ರಲ್ಲಿ ತೋರಿಸಿದ ಮಂಡಲದಲ್ಲಿ ಬಲ್ಬ್ ಬೆಳಗುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ನೀವು ಗುರುತಿಸುವಿರ? ಬಲ್ಬ್ ಬೆಳಗಲು ಮಂಡಲದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ.
ಮಂಡಲದಲ್ಲಿ ಬಲ್ಬ್ ಬೆಳಗಲು ಇದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಸಮಸ್ಯೆ ಎಂದರೆ ಎರಡು ವಿದ್ಯುತ್ ಕೋಶಗಳ ಸಂಪರ್ಕ ತಪ್ಪಾಗಿದೆ. ಧನ ವಿದ್ಯುತ್ ಅಂಶಕ್ಕೆ ಧನ ವಿದ್ಯುತ್ ಅಂಶ ಜೋಡಿಸಲಾಗಿತ್ತು. ಅದನ್ನು ಸರಿ ಪಡಿಸಲು ಒಂದು ವಿದ್ಯುತ್ ಕೋಶ ತೆಗೆದು ಅದರ ಧನ ವಿದ್ಯುತ್ ಅಂಶಕ್ಕೆ ಇನ್ನೊಂದು ಕೋಶದ ಋಣ ವಿದ್ಯುತ್ ಅಂಶವನ್ನು ಸಂಪರ್ಕಿಸಬೇಕು. ಹಾಗೆ ಅದನ್ನು ಸರಿಮಾಡಲಾಗಿದೆ.
5. ವಿದ್ಯುತ್ ಪ್ರವಾಹದ ಯಾವುದಾದರೂ ಎರಡು ಪರಿಣಾಮಗಳನ್ನು ಹೆಸರಿಸಿ.
ವಿದ್ಯುತ್ ಪ್ರವಾಹದ ಎರಡು ಪರಿಣಾಮಗಳು
1) ಉಷ್ಟೋತ್ಪನ್ನ ಪರಿಣಾಮ
ii) ಕಾಂತೀಯ ಪರಿಣಾಮ
6. ಒತ್ತುಗುಂಡಿಯಿಂದ ತಂತಿಯಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡಿದಾಗ ತಂತಿಯ ಬಳಿಯಲ್ಲಿದ್ದ ದಿಕ್ಕೂಚಿಯ ಮುಳ್ಳು ತನ್ನ ಉತ್ತರ – ದಕ್ಷಿಣ ದಿಕ್ಕಿನಿಂದ ವಿಚಲಿತವಾಗುತ್ತದೆ. ಇದನ್ನು ವಿವರಿಸಿ.
ದಿಕ್ಸೂಚಿಯ ಮುಳ್ಳು ಒಂದು ಸಣ್ಣ ಕಾಂತವೆಂದು ನಮಗೆ ತಿಳಿದಿದೆ. ಇದು ಉತ್ತರ – ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತದೆ. – ದಿಕ್ಸೂಚಿಯ ಹತ್ತಿರಕ್ಕೆ ಮತ್ತೊಂದು ಕಾಂತವನ್ನು ತಂದಾಗ ಅದರ ಮುಳ್ಳು ವಿಚಲಿತವಾಗುತ್ತದೆ. ಅದೇ ರೀತಿ ದಿಕ್ಸೂಚಿಯ ಹತ್ತಿರದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದಾಗ ಮುಳ್ಳು ವಿಚಲಿತವಾಗುತ್ತದೆ. ಏಕೆಂದರೆ ತಂತಿಯೂ ಸಹ ವಿದ್ಯುತ್ ಪ್ರವಹಿಸಿದಾಗ ಕಾಂತವಾಗುತ್ತದೆ.
7. ಚಿತ್ರ 14.24 ರಲ್ಲಿ ತೋರಿಸಿರುವ ಮಂಡಲದ ಒತ್ತುಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ ದಿಕ್ಕೂಚಿಯ ಮುಳ್ಳು ವಿಚಲಿತವಾಗುವುದೇ?
ಇಲ್ಲ, ಏಕೆಂದರೆ ಮಂಡಲದಲ್ಲಿ ವಿದ್ಯುತ್ ಕೋಶವಿಲ್ಲ ದಿರುವುದರಿಂದ, ಒತ್ತುಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗಲೂ ವಿದ್ಯುತ್ ಪ್ರವಹಿಸುವುದಿಲ್ಲ.
8. ಬಿಟ್ಟ ಸ್ಥಳಗಳನ್ನು ತುಂಬಿ :
(ಎ) ವಿದ್ಯುತ್ಯೋಶದ ಸಂಕೇತದ ಉದ್ದಗೆರೆ..ಧನ ವಿದ್ಯುದಾಗ್ರವನ್ನು ಪ್ರತಿನಿಧಿಸುತ್ತದೆ.
(ಬಿ) ಎರಡು ಅಥವಾ ಹೆಚ್ಚು ವಿದ್ಯುತ್ಕೋಶಗಳ ಜೋಡಣೆಯನ್ನು ಬ್ಯಾಟರಿ ಎನ್ನುವರು.
(ಸಿ) ಕೋಣೆ ತಾಪಕದ ಒತ್ತು ಗುಂಡಿಯಿಂದ ವಿದ್ಯುತ್ ಪ್ರವಹಿಸುವಂತೆ ಮಾಡಿದಾಗ ಅದು ಅದು ಉಷ್ಣವನ್ನು ಬಿಡುಗಡೆ ಮಾಡುತ್ತದೆ.
(ಡಿ) ವಿದ್ಯುತ್ ಪ್ರವಾಹದ ಉಷ್ಟೋತ್ಪನ್ನ ಪರಿಣಾಮವನ್ನು ಆಧರಿಸಿದ ಒಂದು ಸುರಕ್ಷಾ ಸಾಧನ
ವಿದ್ಯುತ್ ಇಸ್ತ್ರಿ ಪೆಟ್ಟಿಗೆ
9. ಹೇಳಿಕೆ ಸರಿಯಾಗಿದ್ದರೆ ಸರಿ ಎಂದು, ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.
(ಎ) ಎರಡು ಕೋಶಗಳ ಬ್ಯಾಟರಿ ತಯಾರಿಸಲು ಒಂದು ಕೋಶದ ಋಣಾಗ್ರವನ್ನು ಮತ್ತೊಂದು ಕೋಶದ ಋಣಾಗ್ರಕ್ಕೆ ಜೋಡಿಸಬೇಕು. (ಸರಿ, ತಪ್ಪು)
ಉತ್ತರ
ತಪ್ಪು
(ಬಿ) ಬೆಸೆಯ ಮೂಲಕ ಹರಿಯುವ ವಿದ್ಯುತ್ ತನ್ನ ನಿರ್ದಿಷ್ಟ ಮಟ್ಟವನ್ನು ಮೀರಿದಾಗ, ಬೆಸೆಯ ತಂತಿ ಕರಗಿ ತುಂಡಾಗುತ್ತದೆ. (ಸರಿ) ತಪ್ಪು)
ಉತ್ತರ
ಸರಿ
(ಸಿ) ವಿದ್ಯುತ್ಕಾಂತವು ಕಬ್ಬಿಣದ ತುಂಡನ್ನು ಆಕರ್ಷಿಸುವುದಿಲ್ಲ. (ಸರಿ) ತಪ್ಪು)
ಉತ್ತರ
ತಪ್ಪು
(ಡಿ) ವಿದ್ಯುತ್ ಘಂಟೆಯು ವಿದ್ಯುತ್ಕಾಂತವನ್ನು ಒಳಗೊಂಡಿದೆ. (ಸರಿ) ತಪ್ಪು)
ಉತ್ತರ
(ಸರಿ)
10. ಕಸದ ರಾಶಿಯಿಂದ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸಲು ವಿದ್ಯುತ್ಕಾಂತವನ್ನು ಬಳಸಬಹುದು ಎಂದು ನೀವು ಆಲೋಚಿಸುವಿರ? ವಿವರಿಸಿ,
ಇಲ್ಲ. ಏಕೆಂದರೆ ವಿದ್ಯುತ್ಕಾಂತವು ಕಾಂತೀಯ ವಸ್ತುಗಳನ್ನು ಮಾತ್ರ ಆಕರ್ಷಿಸುತ್ತದೆ. ಪ್ಲಾಸ್ಟಿಕ್ ಚೀಲಗಳು, ಆಕಾಂತೀಯ ವಸ್ತುವಾಗಿರುವುದರಿಂದ ವಿದ್ಯುತ್ಕಾಂತಗಳಿಂದ ಆಕರ್ಷಣೆಗೆ ಒಳಗಾಗುವುದಿಲ್ಲ.
11. ನಿಮ್ಮ ಮನೆಯಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆಯುವಾಗ ದುರಸ್ತಿ ಮಾಡುವ ವ್ಯಕ್ತಿಯು ಬೆಸೆಯ ಬದಲಾಗಿ ಯಾವುದೋ ಒಂದು ಸಣ್ಣ ತಂತಿಯನ್ನು ಬಳಸಲು ಮುಂದಾಗುವನು. ಇದಕ್ಕೆ ನೀವು ಒಪ್ಪುವಿರ? ನಿಮ್ಮ ಪ್ರತಿಕ್ರಿಯೆಗೆ ಕಾರಣ ನೀಡಿ.
ಇಲ್ಲ, ಒಪ್ಪಲು ಆಗುವುದಿಲ್ಲ. ಏಕೆಂದರೆ ಬೆಸೆಯು ವಿಶೇಷ ಪದಾರ್ಥಗಳಿಂದ ತಯಾರಿಸಲ್ಪಟ್ಟ ತಂತಿಗಳಿಂದ ಮಾಡಲ್ಪಟ್ಟಿರುತ್ತದೆ. ಇದರ ಮೂಲಕ ಅತ್ಯಧಿಕ ವಿದ್ಯುತ್ ಪ್ರವಹಿಸಿದಾಗ ಆ ತಂತಿ ಕರಗಿ ತುಂಡಾಗಿ ವಿದ್ಯುತ್ ಉಪಕರಣಗಳು ಹಾನಿಗೆ ಒಳಗಾಗುವುದನ್ನು ತಪ್ಪಿಸುವುದರ ಜೊತೆಗೆ ಅವುಗಳನ್ನು ಬೆಂಕಿಯಿಂದಲೂ ರಕ್ಷಿಸುತ್ತದೆ. ಆದ್ದರಿಂದ ನಾವು ಆ ವ್ಯಕ್ತಿಗೆ ISI ಗುರ್ತು ಇರುವ ಬೆಸೆಯನ್ನೇ ಬಳಸುವಂತೆ ಒತ್ತಾಯಿಸುತ್ತೇವೆ.
12. ಚಿತ್ರ 14.4ರಲ್ಲಿ ತೋರಿಸಿದಂತೆ ವಿದ್ಯುತ್‌ಕೋಶದ ಹಿಡಿಕೆ, ಒತ್ತುಗುಂಡಿ ಮತ್ತು ಒಂದು ಬಲ್ಬ್ ಬಳಸಿ, ಜುಬೇದಾ ಒಂದು ವಿದ್ಯುತ್ ಮಂಡಲವನ್ನು ಮಾಡಿರುವಳು. ಒತ್ತುಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ ಬಲ್ಬ್ ಬೆಳಗಲಿಲ್ಲ. ಮಂಡಲದಲ್ಲಿರಬಹುದಾದ ದೋಷಗಳನ್ನು ಗುರ್ತಿಸಲು ಅವಳಿಗೆ ಸಹಾಯ ಮಾಡಿ.
ಮಂಡಲದಲ್ಲಿರಬಹುದಾದ ದೋಷಗಳು
i) ವಿದ್ಯುತ್ ಕೋಶಗಳನ್ನು ಸರಿಯಾಗಿ ಸಂಪರ್ಕ ಮಾಡಿಲ್ಲದಿರಬಹುದು. ಅದನ್ನು ಪರೀಕ್ಷಿಸಿ. ಒಂದು ವಿದ್ಯುತ್ ಕೋಶದ ಧನಾಗ್ರವನ್ನು ಇನ್ನೊಂದು ಕೋಶದ ಋಣಾಗ್ರಕ್ಕೆ ಸಂಪರ್ಕಿಸಬೇಕು.
ii) ಸಂಪರ್ಕ ಮಾಡಲಾದ ತಂತಿ ಬಿಗಿಯಾಗಿಲ್ಲದಿರ ಬಹುದು ಅದನ್ನು ಸರಿಪಡಿಸಿ.
iii) ಬಲ್ಬ್ ಅನ್ನು ಪರೀಕ್ಷಿಸಿ, ಅದು ಹಾಳಾಗಿದ್ದರೆ ಸರಿಯಾದ ಬಲ್ಬ್ ಅನ್ನು ಅಳವಡಿಸಿ.
13. ಚಿತ್ರ 14.25ರಲ್ಲಿ ತೋರಿಸಿರುವ ಮಂಡಲದಲ್ಲಿ
(i) ಒತ್ತು ಗುಂಡಿ ಸಂಪರ್ಕ ರಹಿತ ಸ್ಥಿತಿಯಲ್ಲಿದ್ದಾಗ ಬಲ್ಬ್ ಬೆಳಗುವುದೆ?
ಒತ್ತು ಗುಂಡಿ ಸಂಪರ್ಕ ರಹಿತ ಸ್ಥಿತಿಯಲ್ಲಿದ್ದಾಗ ಯಾವುದೇ ಬಲ್ಬ್ ಬೆಳಗಲು ಸಾಧ್ಯವಿಲ್ಲ.
(ii) ಒತ್ತು ಗುಂಡಿಯನ್ನು ಸಂಪರ್ಕ ಸ್ಥಿತಿಗೆ ತಂದಾಗ A, B ಮತ್ತು C ಬಲ್ಬ್ ಗಳು ಯಾವ ಕ್ರಮದಲ್ಲಿ ಬೆಳಗುತ್ತವೆ?
ವಿದ್ಯುತ್ ಕೋಶಗಳ (ಬ್ಯಾಟರಿಯ) ಸಾಮರ್ಥ್ಯಕ್ಕೆ ತಕ್ಕಂತೆ A, B ಮತ್ತು C ಮೂರೂ ಬಲ್ಬ್ ಗಳು ಏಕಕಾಲದಲ್ಲಿ ಬೆಳಗುತ್ತದೆ.
7ನೇ ತರಗತಿ ವಿಜ್ಞಾನ ಭಾಗ-2
ಅಧ್ಯಾಯ 15
<span;>ಬೆಳಕು :
ಪ್ರಶ್ನೋತ್ತರಗಳು/ನೋಟ್ಸ್
1. ಖಾಲಿ ಸ್ಥಳ ತುಂಬಿ :
(ಎ) ಪರದೆಯ ಮೇಲೆ ಪಡೆಯಲಾಗದ ಪ್ರತಿಬಿಂಬವನ್ನು ಮಿಥ್ಯ ಪ್ರತಿಬಿಂಬ ಎನ್ನುವರು.
(ಬಿ) ಪೀನ ದರ್ಪಣದಿಂದ ಉಂಟಾದ ಪ್ರತಿಬಿಂಬವು. ಯಾವಾಗಲೂ ಮಿಥ್ಯ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.
(ಸಿ) ಯಾವಾಗಲೂ ವಸ್ತುವಿನ ಗಾತ್ರದಷ್ಟೇ ಇರುವ ಪ್ರತಿಬಿಂಬವು ಸಮತಲ ದರ್ಪಣದಿಂದ ಉಂಟಾಗುತ್ತದೆ.
(ಡಿ) ಪರದೆಯ ಮೇಲೆ ಪಡೆಯಬಹುದಾದ ಪ್ರತಿಬಿಂಬವನ್ನು ಸತ್ಯ ಪ್ರತಿಬಿಂಬ ಎನ್ನುವರು.
(ಇ) ನಿಮ್ನ ಮಸೂರದಿಂದ ಉಂಟಾದ ಪ್ರತಿಬಿಂಬವನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ.
2. ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ ಸರಿ ಮತ್ತು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.
ಎ) ಪೀನ ದರ್ಪಣದಿಂದ ನಾವು ವರ್ಧಿತ ಮತ್ತು ನೇರ ಪ್ರತಿಬಿಂಬವನ್ನು ಪಡೆಯಬಹುದು. (ಸರಿ/ತಪ್ಪು)
ತಪ್ಪು.
ಪೀನ ದರ್ಪಣದಿಂದ ನಾವು ನೇರ, ಮಿಥ್ಯ ಮತ್ತು ಚಿಕ್ಕದಾದ ಪ್ರತಿಬಿಂಬವನ್ನು ಪಡೆಯಬಹುದು.
(ಬಿ) ನಿಮ್ನ ಮಸೂರವು ಯಾವಾಗಲೂ ಮಿಥ್ಯ ಪ್ರತಿಬಿಂಬ ವನ್ನು ಉಂಟುಮಾಡುತ್ತದೆ. (ಸರಿ/ತಪ್ಪು)
ಸರಿ.
(ಸಿ) ನಿಮ್ನ ದರ್ಪಣದಿಂದ ನೈಜ, ವರ್ಧಿತ ಮತ್ತು ತಲೆಕೆಳ ಗಾದ ಪ್ರತಿಬಿಂಬವನ್ನು ಪಡೆಯುತ್ತೇವೆ. (ಸರಿ/ತಪ್ಪು)
ಸರಿ
ನಿಮ್ನ ದರ್ಪಣದಿಂದ ಸತ್ಯ ತಲೆಕೆಳಗಾದ ಪ್ರತಿಬಿಂಬ ವನ್ನು ಪಡೆಯುತ್ತೇವೆ.
(ಡಿ) ಸತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ ಪಡೆಯಲಾಗುವುದಿಲ್ಲ. (ಸರಿ/ತಪ್ಪು)
ತಪ್ಪು.
ಸತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ ಪಡೆಯ ಬಹುದು.
(ಇ) ನಿಮ್ನ ದರ್ಪಣವು ಯಾವಾಗಲೂ ಸತ್ಯ ಪ್ರತಿಬಿಂಬವನ್ನು ಉಂಟು ಮಾಡುತ್ತದೆ. (ಸರಿ/ತಪ್ಪು)
ತಪ್ಪು.
ನಿಮ್ಮ ದರ್ಪಣವು ಸತ್ಯ ಮತ್ತು ಮಿಥ್ಯ ಎರಡೂ ಪ್ರತಿಬಿಂಬಗಳನ್ನು ಉಂಟುಮಾಡಬಲ್ಲದು.
1. ಕಾಲಂ – I ರ ಅಂಶಗಳನ್ನು ಕಾಲಂ -II ರ ಸೂಕ್ತವಾದ ಒಂದು ಅಥವಾ ಹೆಚ್ಚಿನ ಅಂಶಗಳೊಂದಿಗೆ ಹೊಂದಿಸಿ.
1) ಸಮತಲ ದರ್ಪಣ….v) ಪ್ರತಿಬಿಂಬವು ನೇರ ಮತ್ತು ವಸ್ತುವಿನಷ್ಟೆ ಗಾತ್ರದ್ದಾಗಿರುತ್ತದೆ.
2) ಪೀನ ದರ್ಪಣ……(ii) ವಿಶಾಲವಾದ ಸ್ಥಳದಲ್ಲಿ ಹರಡಿದ ವಸ್ತುಗಳ ಪ್ರತಿಬಿಂಬವನ್ನು ಉಂಟು ಮಾಡಬಲ್ಲದು.
3)ಪೀನ ಮಸೂರ….1) ವರ್ಧಕ ಮಸೂರವಾಗಿ ಬಳಸಲಾಗುತ್ತದೆ.
4)ನಿಮ್ನ ದರ್ಪಣ…… ii) ಹಲ್ಲಿನ ದೊಡ್ಡದಾದ ಪ್ರತಿಬಿಂಬವನ್ನು ನೀಡಲು ದಂತ ವೈದ್ಯರು ಬಳಸುತ್ತಾರೆ.
6) ನಿಮ್ನ ಮಸೂರ …….(iv) ಪ್ರತಿಬಿಂಬವು ನೇರವಾಗಿರುತ್ತದೆ ಮತ್ತು ವಸ್ತುವಿಗಿಂತ ಚಿಕ್ಕದಾಗಿರುತ್ತದೆ.
4.ಸಮತಲ ದರ್ಪಣ ಉಂಟುಮಾಡುವ ಪ್ರತಿಬಿಂಬದ ಲಕ್ಷಣಗಳನ್ನು ತಿಳಿಸಿ.
ಸಮತಲ ದರ್ಪಣ ಉಂಟುಮಾಡುವ ಪ್ರತಿಬಿಂಬದ ಲಕ್ಷಣಗಳು :
i) ಪ್ರತಿಬಿಂಬವು ನೇರವಾಗಿರುತ್ತದೆ.
ii) ಮಿಥ್ಯ ಪ್ರತಿಬಿಂಬ
iii) ವಸ್ತುವಿನ ಗಾತ್ರದಷ್ಟೇ ಇರುತ್ತದೆ.
iv) ವಸ್ತುವು ದರ್ಪಣದ ಮುಂದೆ ಇರುವಷ್ಟೇ ದೂರ ದಲ್ಲಿ ಪ್ರತಿಬಿಂಬವು ದರ್ಪಣದ ಹಿಂಭಾಗದಲ್ಲಿ ಉಂಟಾಗುತ್ತದೆ.
v) ವಸ್ತುವಿನ ಎಡಭಾಗವು ಪ್ರತಿಬಿಂಬದಲ್ಲಿ ಬಲಭಾಗವಾಗಿರುತ್ತದೆ, ಬಲ ಭಾಗವು ಎಡ ಭಾಗವಾಗಿರುತ್ತದೆ.
5. ಸಮತಲ ದರ್ಪಣದಲ್ಲಿ ನೋಡಿದಾಗ ಮೂಲ ಅಕ್ಷರ ದಂತೆಯೇ ಕಾಣುವ ಇಂಗ್ಲೀಷ್ ವರ್ಣಮಾಲೆ ಅಥವಾ
ನಿಮಗೆ ತಿಳಿದಿರುವ ಯಾವುದೇ ಭಾಷೆಯ ವರ್ಣ ಮಾಲೆಯ ಅಕ್ಷರಗಳನ್ನು ಕಂಡುಹಿಡಿಯಿರಿ. ನಿಮ್ಮ ವೀಕ್ಷಣೆಯನ್ನು ಚರ್ಚಿಸಿ.
ಸಮತಲ ದರ್ಪಣದಲ್ಲಿ ನೋಡಿದಾಗ ಮೂಲ ಅಕ್ಷರ ದಂತೆಯೇ ಕಾಣುವ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳು.
A, H, I, M, O, T, U, V, W, X, Y
6. ಮಿಥ್ಯ ಪ್ರತಿಬಿಂಬ ಎಂದರೇನು ? ಮಿಥ್ಯ ಪ್ರತಿಬಿಂಬವು ಉಂಟಾಗುವ ಸಂದರ್ಭವೊಂದನ್ನು ತಿಳಿಸಿ.
ಯಾವ ಪ್ರತಿಬಿಂಬಗಳನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಾಗುವುದಿಲ್ಲವೋ ಅವುಗಳನ್ನು ಮಿಥ್ಯ ಪ್ರತಿಬಿಂಬ ಎನ್ನುವರು.
ಸಮತಲ ದರ್ಪಣದಿಂದ ಮಿಥ್ಯಪ್ರತಿಬಿಂಬವು ಉಂಟಾಗುತ್ತದೆ.
7. ಪೀನ ಮತ್ತು ನಿಮ್ಮ ಮಸೂರಗಳ ನಡುವಣ ಎರಡು ವ್ಯತ್ಯಾಸಗಳನ್ನು ತಿಳಿಸಿ.
ಪೀನ ಮಸೂರ.
ಅಂಚಿಗಿಂತ ಮಧ್ಯದಲ್ಲಿ ದಪ್ಪವಾಗಿರುವ ಮಸೂರಗಳು ಪೀನ ಮಸೂರಗಳು.
ಉದಾ:
i) ಪೀನ ಮಸೂರವು ಸಾಮಾನ್ಯವಾಗಿ ತನ್ನ ಮೂಲಕ ಹಾಯುವ ಬೆಳಕನ್ನು ಕೇಂದ್ರೀಕರಿಸುತ್ತದೆ. (ಒಳಮುಖ ವಾಗಿ ಬಾಗುತ್ತದೆ). ಆದ್ದರಿಂದ ಇದನ್ನು ಕೇಂದ್ರೀಕರಿಸುವ ಮಸೂರ ಎನ್ನುವರು.
iii) ಪೀನ ಮಸೂರವು ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ ವನ್ನು ಉಂಟು ಮಾಡುತ್ತದೆ. ವಸ್ತುವನ್ನು ಮಸೂರಕ್ಕೆ ಬಹಳ ಸಮೀಪದಲ್ಲಿಟ್ಟಾಗ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವರ್ಧಿತವಾಗಿರುತ್ತದೆ. ವಸ್ತುಗಳನ್ನು ದೊಡ್ಡದಾಗಿ ನೋಡಲು ಪೀನ ಮಸೂರವನ್ನು ವರ್ಧಕ ಮಸೂರವಾಗಿ ಬಳಸುವರು.
ನಿಮ್ನ ಮಸೂರ
1) ಮಧ್ಯದಲ್ಲಿ ಅಂಚಿಗಿಂತ ಹೆಚ್ಚು ತೆಳುವಾಗಿರುವ ಮಸೂರಗಳು ನಿಮ್ನ ಮಸೂರಗಳು
ii) ನಿಮ್ನ ಮಸೂರವು ಬೆಳಕನ್ನು ವಿಕೇಂದ್ರೀಕರಿಸುತ್ತದೆ. (ಹೊರ ಮುಖವಾಗಿ ಬಾಗುತ್ತದೆ). ಆದ್ದರಿಂದ ಇದನ್ನು ವಿಕೇಂದ್ರೀಕರಿಸುವ ಮಸೂರ ಎನ್ನುವರು.
ii) ನಿಮ್ನ ಮಸೂರವು ಯಾವಾಗಲೂ ನೇರ, ಮಿಥ್ಯ ಮತ್ತು ವಸ್ತುವಿನ ಗಾತ್ರಕ್ಕಿಂತ ಚಿಕ್ಕದಾದ ಪ್ರತಿಬಿಂಬವನ್ನು ಉಂಟು ಮಾಡುತ್ತದೆ.
8. ನಿಮ್ನ ಮತ್ತು ಪೀನ ದರ್ಪಣಗಳ ಒಂದೊಂದು ಉಪಯೋಗವನ್ನು ತಿಳಿಸಿ,
ನಿಮ್ನ ದರ್ಪಣಗಳನ್ನು ದಂತ ವೈದ್ಯರು ಹಲ್ಲಿನ ದೊಡ್ಡದಾದ ಪ್ರತಿಬಿಂಬವನ್ನು ನೋಡಲು, ಟಾರ್ಚ್‌ಗಳ ಪ್ರತಿ ಫಲಕಗಳಾಗಿ, ಕಾರು ಮತ್ತು ಸ್ಕೂಟರ್‌ಗಳ ಮುಂಭಾಗದ ದೀಪಗಳಿಗಾಗಿ ಉಪಯೋಗಿಸುವರು.
ಪೀನ ದರ್ಪಣಗಳನ್ನು ಚಾಲಕರು ತಮ್ಮ ಹಿಂಬದಿಯ ವಾಹನ ದಟ್ಟಣೆಯನ್ನು ತಿಳಿಯಲು ಪಾರ್ಶ್ವನೋಟ ದರ್ಪಣ ವಾಗಿ ಉಪಯೋಗಿಸುವರು.
9. ಯಾವ ವಿಧದ ದರ್ಪಣವು ಸತ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ ?
ನಿಮ್ನ ದರ್ಪಣವು ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.
10. ಯಾವ ವಿಧದ ಮಸೂರವು ಯಾವಾಗಲೂ ಮಿಥ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ ?
ನಿಮ್ನ ಮಸೂರವು ಯಾವಾಗಲೂ ಮಿಥ್ಯ ಪ್ರತಿಬಿಂಬ ವನ್ನು ಉಂಟುಮಾಡುತ್ತದೆ.
11 ರಿಂದ 13 ರವರೆಗಿನ ಪ್ರಶ್ನೆಗಳಿಗೆ ಸರಿಯಾದ ಆಯ್ಕೆಯನ್ನು ಆರಿಸಿ.
11. ವಸ್ತುವಿಗಿಂತ ದೊಡ್ಡದಾದ ಮಿಥ್ಯ ಪ್ರತಿಬಿಂಬವನ್ನು ಇದರಿಂದ ಪಡೆಯಬಹುದು.
i) ನಿಮ್ನ ದರ್ಪಣ
ii) ಪೀನ ದರ್ಪಣ
iii)ನಿಮ್ನ ಮಸೂರ
iv) ಸಮತಲ ದರ್ಪಣ
ಉತ್ತರ : ii. ನಿಮ್ನ ದರ್ಪಣ
12. ಸಮತಲ ದರ್ಪಣದಲ್ಲಿ ಡೇವಿಡ್ ತನ್ನ ಪ್ರತಿಬಿಂಬವನ್ನು ವೀಕ್ಷಿಸುತ್ತಿದ್ದಾನೆ. ದರ್ಪಣ ಮತ್ತು ಪ್ರತಿಬಿಂಬಗಳ ನಡು ವಣ ದೂರ 4m ಡೇವಿಡ್ ದರ್ಪಣದ ಕಡೆಗೆ 1m ಚಲಿಸಿದರೆ, ಡೇವಿಡ್ ಮತ್ತು ಅವನ ಪ್ರತಿಬಿಂಬದ ನಡುವಿನ ದೂರವು
i) 3m. ii) 5m iii) 6m iv) 8m
ಉತ್ತರ : iii. ವಸ್ತುವಿನಿಂದ ದರ್ಪಣಕ್ಕೆ + ದರ್ಪಣದಿಂದ ಪ್ರತಿಬಿಂಬಕ್ಕೆ 3 + 3 = 6m
13. ಒಂದು ಕಾರಿನ ಹಿನ್ನೋಟ ದರ್ಪಣವು ಸಮತಲ ದರ್ಪಣವಾಗಿದೆ. ಕಾರನ್ನು ಚಾಲಕ 2 m/s ವೇಗದಲ್ಲಿ ಹಿಂದಕ್ಕೆ ತರುತ್ತಿದ್ದಾನೆ. ಚಾಲಕ ಹಿನ್ನೋಟ ದರ್ಪಣದಲ್ಲಿ ತನ್ನ ಕಾರಿನ ಹಿಂಭಾಗದಲ್ಲಿ ಟ್ರಕ್ ನಿಲ್ಲಿಸಿರುವುದನ್ನು ಕಾಣುತ್ತಾನೆ. ಚಾಲಕನಿಗೆ ಟ್ರಕ್‌ನ ಪ್ರತಿಬಿಂಬವು ಸಮೀಪಿಸಿದಂತೆ ಕಾಣುವ ವೇಗ
i) 1 m/s ii) 2 m/s iii) 4 m/s iv) 8 m/s
ಉತ್ತರ : iii. 4 m/s
7ನೇ ತರಗತಿ ವಿಜ್ಞಾನ ಭಾಗ-2
<span;>ನೀರು: ಅಮೂಲ್ಯ ಸಂಪನ್ಮೂಲ
16ನೇ ಅಧ್ಯಾಯದ ಎಲ್ಲಾ ಪ್ರಶ್ನೋತ್ತರಗಳು/ನೋಟ್ಸ್
ಹೇಳಿಕೆ ಸರಿಯಾಗಿದ್ದರೆ ಸರಿ ಮತ್ತು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.
ಎ) ಭೂಮಿಯಲ್ಲಿ ಸಂಗ್ರಹವಾಗಿರುವ ಸಿಹಿ ನೀರು ಪ್ರಪಂಚದ ನದಿ ಮತ್ತು ಸರೋವರಗಳಲ್ಲಿರುವ ನೀರಿಗಿಂತ ಹೆಚ್ಚಾಗಿದೆ. (ಸರಿ/ತಪ್ಪು)
ಸರಿ.
(ಬಿ) ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನರು ಮಾತ್ರ ನೀರಿನ ಕೊರತೆಯ ಸಮಸ್ಯೆಯನ್ನು ಎದುರುಸುತ್ತಿದ್ದಾರೆ. (ಸರಿ/ತಪ್ಪು)
ತಪ್ಪು.
ಎಲ್ಲಾ ಪ್ರದೇಶಗಳಲ್ಲಿ ವಾಸಿಸುವ ಜನರು ನೀರಿನ ಕೊರತೆಯ ಸಮಸ್ಯೆಯನ್ನು ಎದುರುಸುತ್ತಿದ್ದಾರೆ.
(ಸಿ) ಹೊಲ-ಗದ್ದೆಗಳ ನೀರಾವರಿಗೆ ನದಿಯ ನೀರೊಂದೇ ಆಕರವಾಗಿದೆ. (ಸರಿ/ತಪ್ಪು)
ತಪ್ಪು.
ಹೊಲ-ಗದ್ದೆಗಳ ನೀರಾವರಿಗೆ ಎಲ್ಲಾ ರೀತಿಯ ನೀರಿನ ಆಕರಗಳಾಗಿವೆ.
(ಡಿ) ಮಳೆಯೇ ನೀರಿನ ಅಂತಿಮ ಆಕರ. (ಸರಿ/ತಪ್ಪು)
ಸರಿ.
2. ಅಂತರ್ಜಲವು ಹೇಗೆ ಮರುಪೂರಣವಾಗುತ್ತದೆ? ವಿವರಿಸಿ.
ಮಳೆ ನೀರು ಮತ್ತು ನೀರಿನ ಇತರ ಆಕರಗಳಾದ ನದಿ ಮತ್ತು ಕೊಳಗಳಿಂದ ನೀರು ಆಳಕ್ಕೆ ಇಳಿದು ಮಣ್ಣಿನ ಮಧ್ಯೆ ಇರುವ ಖಾಲಿ ಸ್ಥಳಗಳು ಮತ್ತು ಬಿರುಕುಗಳನ್ನು ತುಂಬುತ್ತದೆ.ಈ ಒಳನುಸುಳುವಿಕೆ (infiltration) ಪ್ರಕ್ರಿಯೆಯಿಂದ ನೆಲದ ನೀರು ಮರುಪೂರಣ ಆಗುತ್ತದೆ.
ಮಣ್ಣಿನಲ್ಲಿ ನೀರು ಇಂಗುವ ಪ್ರಕ್ರಿಯೆ ಹೆಚ್ಚಾಗಬೇಕು.
3. ಐವತ್ತು ಮನೆಗಳಿರುವ ಒಂದು ಬೀದಿಗಳಲ್ಲಿ ಹತ್ತು ಕೊಳವೆ ಬಾವಿಗಳಿವೆ. ಅಂತರ್ಜಲ ಮಟ್ಟದ ಮೇಲೆ ಆಗುವ ದೀರ್ಘಾಕಾಲದ ಪ್ರಭಾವವೇನು ?
ಐವತ್ತು ಮನೆಗಳಲ್ಲಿರುವ ಜನರೆಲ್ಲರೂ ಮಿತವ್ಯಯದಿಂದ ನೀರನ್ನು ಬಳಸಿದರೆ ಕೊಳವೆ ಬಾವಿಗಳಿರುವ ಅಂತರ್ಜಲದ ಮಟ್ಟ ಕುಸಿಯದೆ ಹಲವಾರು ವರ್ಷಗಳು ಬರಬಹುದು. ಅತ್ಯಧಿಕವಾಗಿ ನೀರನ್ನು ತೆಗೆಯುತ್ತಿದ್ದರೆ ದೀರ್ಘಕಾಲದಲ್ಲಿ ಅಂತರ್ಜಲವು ಮುಗಿದು, ಕೊಳವೆ ಬಾವಿಗಳಿಂದ ನೀರು ಪೂರೈಕೆಯಾಗುವುದಿಲ್ಲ. ಆಗ ಕೊಳವೆ ಬಾವಿಗಳು ವ್ಯರ್ಥವಾಗುತ್ತವೆ.
4. ನಿಮಗೆ ಉದ್ಯಾನವನವೊಂದರ ನಿರ್ವಹಣೆಯನ್ನು ನೀಡಿದರೆ, ನೀರಿನ ಬಳಕೆಯನ್ನು ಹೇಗೆ ಮಿತಗೊಳಿ ಸುವಿರಿ?
ಉದ್ಯಾನವನದಲ್ಲಿ ಯಾವ ಯಾವ ಗಿಡಗಳಿಗೆ ಎಷ್ಟು ಬೇಕೋ ಅಷ್ಟೇ ನೀರನ್ನು ಉಪಯೋಗಿಸಿ, ಮಿತವ್ಯಯದಿಂದ ಬಳಸುತ್ತೇನೆ. ಎಲ್ಲಿಯೂ ನೀರು ಪೋಲಾಗದಂತೆ, ಸುರಿದು ಹೋಗದಂತೆ ಕಾಳಜಿ ವಹಿಸುತ್ತೇನೆ. ಅಷ್ಟೇ ಅಲ್ಲದೆ ಮಳೆ ನೀರಿನ ಕೊಯ್ಲು ಮಾಡಿಸಿ, ಮಳೆ ನೀರನ್ನು ಸಹ ಸಂಗ್ರಹಿಸಿಡುತ್ತೇನೆ.
ಹನಿ ನೀರಾವರಿ ಮೂಲಕ ನೀರನ್ನು ಹಾಯಿಸುವುದರಿಂದ ನೀರು ಹೆಚ್ಚು ಪೋಲಾಗುವುದಿಲ್ಲ. ನೀರು ಗಿಡದ ಬುಡಕ್ಕೆ ಬೀಳುವಂತೆ ಮಾಡಿದರೆ ಹೆಚ್ಚು ಉತ್ತಮ. ತುಂತುರು ನೀರಾವರಿಯಿಂದ ಹುಲ್ಲಿಗೆ ನೀರನ್ನು ಹರಿಸಬಹುದು.
5. ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುವ ಅಂಶಗಳನ್ನು ವಿವರಿಸಿ.
ಅಂತರ್ಜಲ ಮಟ್ಟವು ಕುಸಿಯಲು ಕಾರಣಗಳು :
1)ನೀರು ಸಾಕಷ್ಟು ಮರುಪೂರಣವಾಗವಿದ್ದರೆ ಅಂತರ್ಜಲ ಮಟ್ಟ ಕೆಳಗೆ ಹೋಗಬಹುದು.
2)ಜನಸಂಖ್ಯಾ ಹೆಚ್ಚಳ, ಕೈಗಾರಿಕೆ ಮತ್ತು ಕೃಷಿ ಚಟುವಟಿಕೆಗಳು ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ಅಂಶಗಳು.
3)ಕಡಿಮೆ ಮಳೆ ಬೀಳುವುದು ಅಂತರ್ಜಲ ಮಟ್ಟ ಕಡಿಮೆಯಾಗಲು ಇನ್ನೊಂದು ಕಾರಣ.
4) ಅರಣ್ಯನಾಶ ಮತ್ತು ನೀರಿನ ಇಂಗುವಿಕೆಯ ವ್ಯಾಪ್ತಿ ಪ್ರದೇಶ ಕಡಿಮೆಯಾಗುವುದು.
ಹೆಚ್ಚಿನ ವಿವರಣೆ
ಜನಸಂಖ್ಯಾ ಹೆಚ್ಚಳ
ಜನಸಂಖ್ಯಾ ಹೆಚ್ಚಳವು ಮನೆ, ಅಂಗಡಿ, ಕಛೇರಿ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣದ ಬೇಡಿಕೆ ಹೆಚ್ಚುವಂತೆ ಮಾಡುತ್ತದೆ. ಇದು ಮುಕ್ತ ಪ್ರದೇಶಗಳಾದ ಉದ್ಯಾನವನ ಮತ್ತು ಆಟದ ಮೈದಾನಗಳನ್ನು ಕಡಿಮೆ ಮಾಡುತ್ತದೆ. ಬಿದ್ದ ಮಳೆ ನೀರು ಭೂಮಿಯೊಳಗೆ ಇಂಗುವುದು ಇದರಿಂದಾಗಿ ಕಡಿಮೆಯಾಗುತ್ತದೆ.
ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ ಹೆಚ್ಚು ಪ್ರಮಾಣದ ನೀರು ಬೇಕಾಗುತ್ತದೆ. ಆಗಾಗ್ಗೆ ಈ ಉದ್ದೇಶಕ್ಕೆ ಅಂತರ್ಜಲವನ್ನು ಬಳಸಲಾಗುತ್ತದೆ.
ಆದ್ದರಿಂದ ಒಂದೆಡೆ ನಾವು ಹೆಚ್ಚು ಅಂತರ್ಜಲವನ್ನು ಬಳಸುತ್ತಿದ್ದೇವೆ ಮತ್ತು ಮತ್ತೊಂದೆಡೆ ನಾವು ಕಡಿಮೆ ನೀರನ್ನು ಭೂಮಿಯೊಳಗೆ ಇಂಗುವಂತೆ ಮಾಡುತ್ತಿದ್ದೇವೆ. ಇದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ.
ಹೆಚ್ಚುತ್ತಿರುವ ಕೈಗಾರಿಕೆಗಳು
ಬಹುತೇಕ ಎಲ್ಲ ಉತ್ಪಾದನಾ ಪ್ರಕ್ರಿಯೆಯಲ್ಲಿಯೂ ನೀರು ಅವಶ್ಯವಾಗಿದೆ. ಕೈಗಾರಿಕೆಗಳ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದೆ. ಬಹುತೇಕ ಕೈಗಾರಿಕೆಗಳಲ್ಲಿ ಭೂಮಿಯಿಂದ ಹೊರತೆಗೆದ ನೀರನ್ನು ಬಳಸಲಾಗುತ್ತಿದೆ.
ಕೃಷಿ ಚಟುವಟಿಕೆಗಳು
ರೈತರು ನೀರಾವರಿಗೆ ಅಂತರ್ಜಲವನ್ನು ಬಳಸುತ್ತಾರೆ. ಕೃಷಿಯ ಮೇಲಿನ ಜನಸಂಖ್ಯಾ ಒತ್ತಡವು ದಿನೇದಿನ ಅಂತರ್ಜಲದ ಬಳಕೆಯನ್ನು ಹೆಚ್ಚು ಅವಲಂಬಿಸುವಂತೆ ಮಾಡಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ.
6. ಸೂಕ್ತ ಉತ್ತರಗಳಿಂದ ಖಾಲಿ ಜಾಗಗಳನ್ನು ಭರ್ತಿ ಮಾಡಿ.
ಎ) ಜನರು ಅಂತರ್ಜಲವನ್ನು ಕೊಳವೆ ಬಾವಿ ಮತ್ತು ಕೈ ಪಂಪುಗಳ ಮೂಲಕ ಪಡೆಯುತ್ತಾರೆ.
ಬಿ) ನೀರಿನ ಮೂರು ಸ್ಥಿತಿಗಳು ಘನ, ದ್ರವ ಮತ್ತು ಅನಿಲ.
ಸಿ) ಭೂಮಿಯ ನೀರಿನ ಧಾರಕ ಪದರಜಲಧರ.
ಡಿ) ಭೂಮಿಯೊಳಗೆ ನೀರು ಇಂಗುವ ಪ್ರಕ್ರಿಯೆಯನ್ನು ಒಳನುಸುಳುವಿಕೆ ಎನ್ನುವರು.
7. ನೀರಿನ ಕೊರತೆ ಉಂಟಾಗಲು ಕೆಳಗಿನವುಗಳಲ್ಲಿ ಯಾವುದು ಒಂದು ಕಾರಣವಲ್ಲ.
1) ಶೀಘ್ರ ಕೈಗಾರಿಕೆಗಳ ಬೆಳವಣಿಗೆ
ii) ಜನಸಂಖ್ಯಾ ಹೆಚ್ಚಳ
ii) ಹೆಚ್ಚು ಮಳೆ ಬೀಳುವುದು
iv) ನೀರಿನ ಮೂಲಗಳ ಅಸಮರ್ಪಕ ನಿರ್ವಹಣೆ
ಉತ್ತರ : iii) ಹೆಚ್ಚು ಮಳೆ ಬೀಳುವುದು
8. ಸರಿಯಾಗಿರುವುದನ್ನು ಆಯ್ಕೆಮಾಡಿ .
ಒಟ್ಟು ನೀರು-
i) ಪ್ರಪಂಚದ ಸರೋವರ ಮತ್ತು ನದಿಗಳಲ್ಲಿ ಸ್ಥಿರವಾಗಿ ಉಳಿದಿದೆ.
1) ಭೂಮಿಯೊಳಗೆ ಸ್ಥಿರವಾಗಿ ಉಳಿದಿದೆ.
i) ಪ್ರಪಂಚದ ಸಮುದ್ರ ಮತ್ತು ಸಾಗರಗಳಲ್ಲಿ ಸ್ಥಿರವಾಗಿ ಉಳಿದಿದೆ.
iv) ವಿಶ್ವದಾದ್ಯಂತ ಸ್ಥಿರವಾಗಿ ಉಳಿದಿದೆ.
ಉತ್ತರ : iv) ವಿಶ್ವದಾದ್ಯಂತ ಸ್ಥಿರವಾಗಿ ಉಳಿದಿದೆ.
9. ಅಂತರ್ಜಲ ಮತ್ತು ಅಂತರ್ಜಲ ಮಟ್ಟವನ್ನು ತೋರಿಸುವ ಚಿತ್ರ ಬರೆಯಿರಿ. ಭಾಗಗಳನ್ನು ಹೆಸರಿಸಿ.
1. ಭೂಮಿಯ ಮೇಲೆ ನೀರಿನ ಆಕರಗಳು ಯಾವುವು ?
ಭೂಮಿಯ ಮೇಲಿನ ಹೆಚ್ಚಿನ ಪ್ರಮಾಣದ ನೀರು ಸಾಗರ, ಸಮುದ್ರ, ನದಿ, ಕೆರೆ, ಹಿಮಾವೃತ ಪರ್ವತಗಳು, ಅಂತರ್ಜಲ ಮತ್ತು ವಾಯುಮಂಡಲದಲ್ಲಿದೆ.
2. ವಿಶ್ವ ನೀರಿನ ದಿನವನ್ನು ಎಂದು ಆಚರಿಸುತ್ತೇವೆ ? ಇದರ ಉದ್ದೇಶವೇನು ?
ಪ್ರತಿ ವರ್ಷ ಮಾರ್ಚಿ 22 ರಂದು ವಿಶ್ವನೀರಿನ ದಿನವನ್ನು
ಪ್ರಪಂಚದಾದ್ಯಂತ ಆಚರಿಸುತ್ತೇವೆ. ಈ ಮೂಲಕ ಜನರಿಗೆ ನೀರನ್ನು ಸಂರಕ್ಷಿಸುವುದರ ಪ್ರಾಮುಖ್ಯತೆಯ ಅರಿವನ್ನು ಮೂಡಿಸುವುದು.
3. ನೀರಿನ ಕೊರತೆ ಇದೆಯೇ? ಇದಕ್ಕೆ ಕಾರಣಗಳೇನು?
ಹೌದು, ಖಂಡಿತವಾಗಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ತೀವ್ರ ಕೊರತೆಯಿದೆ. ಇದು ಪ್ರಪಂಚದಾದ್ಯಂತ ಆತಂಕದ ವಿಷಯವಾಗಿದೆ. ನೀರಿನ
ಕೊರತೆಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖ ವಾದವುಗಳು 1) ನೀರಿನ ಅಸಮರ್ಪಕ ಹಂಚಿಕೆ ii) ಮಳೆಯ ಕೊರತೆ ii) ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರಿಕೆಗಳು ಮತ್ತು ಕೃಷಿಗಾರಿಕೆ iv) ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇತ್ಯಾದಿ.
4. ಜಲಚಕ್ರ ಎಂದರೇನು ? ಚಿತ್ರ ಸಹಿತ ವಿವರಿಸಿ.
ಜಲಚಕ್ರ
1. ಅಂತರ್ಜಲ
2. ಆವಿಯಾಗುವಿಕೆ
3. ಸಾಂದ್ರೀಕರಣ
4. ಮೋಡಗಳು
5. ಬಾಷ್ಪವಿಸರ್ಜನೆ
6. ಇಂಗುವಿಕೆ
7. ಮಳೆ ಬೀಳುವಿಕೆ
ಭೂಮಿಯ ಮೇಲಿನ ನೀರಿನ ಆಕರಗಳಾದ ಸಮುದ್ರ, ಸಾಗರ, ನದಿ, ಕೊಳ, ಕೆರೆ ಇತ್ಯಾದಿಗಳಿಂದ ಆವಿಯಾಗಿ, ನೀರು ಸಾಂದ್ರೀಕೃತವಾಗಿ ಮೋಡವಾಗುತ್ತವೆ. ನಂತರ ಅದು ಮಳೆಯಾಗಿ ಪುನಃ ಭೂಮಿಯ ಮೇಲೆ ನೀರಿನ ಆಕರಗಳಿಗೆ ನೀರು ಒದಗಿಸುವುದು. ಈ ಪ್ರಕ್ರಿಯೆಯು ನಿಸರ್ಗದಲ್ಲಿ ಅವಿರತವಾಗಿ ಸಾಗುತ್ತಲೇ ಇರುತ್ತದೆ. ಇದನ್ನು ಜಲಚಕ್ರ ಎನ್ನುತ್ತಾರೆ.
5. ನೀರಿನ ಕೊಯ್ಲು ಅಥವಾ ಮಳೆನೀರಿನ ಕೊಯ್ಲು ಎಂದರೇನು ?
ಮಳೆಯಿಂದ ಹೆಚ್ಚಿನ ನೀರು ಸರಾಗವಾಗಿ ಹರಿದು ಹೋಗದಂತೆ ತಡೆದು, ಅದನ್ನು ಅಂತರ್ಜಲ ಮರುಪೂರಣ ಮಾಡುವ ಪ್ರಕ್ರಿಯೆಯನ್ನು ಮಳೆ ನೀರಿನ ಕೊಯ್ಲು ಎನ್ನುವರು.
6. ಹೊಲಗಳಲ್ಲಿ ಹನಿ ನೀರಾವರಿಯ ಬಗ್ಗೆ ಚಿತ್ರ ಸಹಿತ ವಿವರಿಸಿ.
ಹನಿ ನೀರಾವರಿಯು ಗಿಡಗಳಿಗೆ ನೀರುಣಿಸುವ ಒಂದು ತಂತ್ರವಾಗಿದ್ದು ಇದರಲ್ಲಿ ಕಿರಿದಾದ ಕೊಳವೆಗಳನ್ನು ಬಳಸಿ ನೀರನ್ನು ನೇರವಾಗಿ ಗಿಡಗಳ ಬುಡಗಳಿಗೆ ಒದಲಾಗಿಸುತ್ತದೆ. ಇದರಿಂದ ನೀರಿನ ಅಪವ್ಯಯವನ್ನು ತಡೆಗಟ್ಟಬಹುದು.
7ನೇ ತರಗತಿ ವಿಜ್ಞಾನ ಭಾಗ 2
ಅಧ್ಯಾಯ 17
<span;>ಕಾಡುಗಳು ನಮ್ಮ ಜೀವನಾಡಿ
ನೋಟ್ಸ್ /ಪ್ರಶ್ನೋತ್ತರಗಳು
1.ಕಾಡು ಬೆಳೆಯಲು ಮತ್ತು ಪುನರುತ್ಪತ್ತಿಯಾಗಲು ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಿ.
ಪ್ರಾಣಿಗಳು ಕೆಲವು ಸಸ್ಯಗಳ ಬೀಜ ಗಳನ್ನು ದೂರ ದೂರಕ್ಕೆ ಪ್ರಸಾರ ಮಾಡುತ್ತವೆ. ಇದರಿಂದ ಅಲ್ಲೆಲ್ಲ ಆ ಜಾತಿಯ ಮರಗಳು, ಸಸ್ಯಗಳು ಬೆಳೆದು ಪುನರುತ್ಪತ್ತಿಯಾಗುವಂತೆ ಮಾಡುತ್ತದೆ.
ಅಷ್ಟೇ ಅಲ್ಲದೆ ಪ್ರಾಣಿಗಳ ಮಲ ಮೂತ್ರಗಳು ಕೊಳೆತ ಹಿಕ್ಕೆಗಳು ಮೊಳಕೆ ಯೊಡೆದ ಬೀಜಗಳಿಗೆ ಪೋಷಕಗಳನ್ನು ಒದಗಿಸಿ ಅವುಗಳು ಸಸ್ಯಗಳಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತವೆ.
ವಿಶಾಲವಾದ ಕಾಡು ಪುನರುತ್ಪತ್ತಿಯಾಗಲು ಮತ್ತು ಬೆಳೆಯಲು ಪಾಣಿ ವೈವಿಧ್ಯವು ಸಹಾಯ ಮಾಡುತ್ತದೆ.
ವಿಘಟಕಗಳು ಕಾಡಿನಲ್ಲಿ ಬೆಳೆಯುವ ಸಸ್ಯಗಳಿಗೆ ಪೋಷಕಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
2. ಕಾಡುಗಳು ಪ್ರವಾಹವನ್ನು ಹೇಗೆ ತಡೆಗಟ್ಟುತ್ತವೆ ಎಂಬು ದನ್ನು ವಿವರಿಸಿ.
ಮಳೆನೀರಿಗೆ ಕಾಡು ನೈಸರ್ಗಿಕ ಹೀರಿಕೆ ಮಾಧ್ಯಮವಾಗಿ ವರ್ತಿಸಿ, ಮಳೆನೀರು ಇಂಗಲು ಅನುವು ಮಾಡಿಕೊಡುತ್ತದೆ.ಭಾರೀ ಮಳೆಯು ಮಣ್ಣಿಗು ಕೂಡ ಹಾನಿಯನ್ನು ಉಂಟುಮಾಡಬಹುದು. ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ.
ಕಾಡುಗಳಲ್ಲಿ ಮರಗಳು ಒತ್ತು ಕಟ್ಟಾಗಿ ಬೆಳೆಯುವು ದರಿಂದ ಮಳೆಯು ಎಷ್ಟೇ ರಭಸವಾಗಿ ಸುರಿದರೂ, ನೀರು
ನೇರವಾಗಿ ನೆಲವನ್ನು ತಾಕುವುದಿಲ್ಲ. ಛತ್ರಿಯಾಕಾರದ ಕಾಡಿನ ಮರಗಳ ಮೇಲ್ಬಾವಣಿಯು ಮಳೆಯ ರಭಸದ ನೀರನ್ನು ತಡೆದು, ಕೊಂಬೆ ಹಾಗೂ ಕಾಂಡಗಳ ಮೂಲಕ ನೀರು ಕೆಳಗೆ ಇಳಿಯುವಂತೆ ಮಾಡುತ್ತದೆ. ಹಾಗೂ ಉದುರಿದ ಎಲೆ ಪದರಗಳ ಮೇಲೆ ಬಿದ್ದು, ನಿಧಾನವಾಗಿ ಮಣ್ಣಿನೊಳಗೆ ಇಳಿಯುವಂತಿರುತ್ತದೆ.
ಹೀಗಾಗಿ ಕಾಡಿನ ಮೇಲೆ ಮಳೆ ಜಾಸ್ತಿ ಬಿದ್ದರೂ ಪ್ರವಾಹ ವಾಗದಂತೆ ಮರಗಳು ಅದನ್ನು ತಡೆಯುತ್ತವೆ.
3. ವಿಘಟಕಗಳೆಂದರೇನು ? ಅವುಗಳಲ್ಲಿ ಯಾವುದಾದರೂ ಎರಡನ್ನು ಹೆಸರಿಸಿ. ಕಾಡಿನಲ್ಲಿ ಅವು ಏನು ಮಾಡುತ್ತವೆ?
ಸತ್ತ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳನ್ನು ಹ್ಯೂಮಸ್ ಆಗಿ ಪರಿವರ್ತನೆ ಮಾಡುವ ಸೂಕ್ಷ್ಮ ಜೀವಿಗಳನ್ನು ವಿಘಟಕಗಳು ಎನ್ನುವರು.
ಉದಾಹರಣೆಗೆ ಸಣ್ಣ ಸಣ್ಣ ಕೀಟಗಳು, ಶತಪದಿಗಳು, ಸಹಸ್ರಪದಿಗಳು, ಗೆದ್ದಲುಗಳು, ಶಿಲೀಂದ್ರಗಳು ಬ್ಯಾಕ್ಟೀರಿಯಾಗಳು ಇತ್ಯಾದಿಗಳು
ಇವು ಕಾಡಿನಲ್ಲಿ ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ಹ್ಯೂಮಸ್ ಆಗಿ ಪರಿವರ್ತಿಸುತ್ತವೆ. . ಹ್ಯೂಮಸ್ ನ ಇರುವಿಕೆಯು ಸತ್ತ ಸಸ್ಯ ಮತ್ತು ಪ್ರಾಣಿಗಳ ದೇಹದ ಪೋಷಕಗಳು ಮಣ್ಣಿಗೆ ಬಿಡುಗಡೆಯಾಗುವುದನ್ನು ಖಾತ್ರಿಗೊಳಿಸುತ್ತದೆ. ಮಣ್ಣಿನಿಂದ ಈ ಪೋಷಕಗಳು ಜೀವಂತ ಸಸ್ಯಗಳ ಬೇರುಗಳ ಮೂಲಕ ಮತ್ತೆ ಹೀರಲ್ಪಡುತ್ತವೆ.ವಿಘಟಕಗಳು ಕಾಡಿನಲ್ಲಿ ಬೆಳೆಯುವ ಸಸ್ಯಗಳಿಗೆ ಪೋಷಕಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
4. ವಾತಾವರಣದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೆಡ್‌ನ ಸಮತೋಲನ ಕಾಯುವಲ್ಲಿ ಕಾಡಿನ ಪಾತ್ರವನ್ನು ವಿವರಿಸಿ.
ಕಾಡಿನಲ್ಲಿರುವ ಅಸಂಖ್ಯಾತ ಸಸ್ಯಗಳು ದ್ಯುತಿಸಂಶ್ಲೇಷಣೆಯ ಮೂಲಕ ಹೇರಳವಾಗಿ ಆಕ್ಸಿಜನ್ ಅನ್ನು ಬಿಡುಗಡೆ ಮಾಡುತ್ತವೆ. ಈ ರೀತಿ ಸಸ್ಯಗಳು ಒದಗಿಸುವ ಆಕ್ಸಿಜನ್ ಅನ್ನು ಪಾಣಿಗಳ ಉಸಿರಾಟಕ್ಕೆ ಒದಗುತ್ತದೆ. ಸಸ್ಯಗಳ ದ್ಯುತಿ ಸಂಶ್ಲೇಷಣೆಯ ಪ್ರಕ್ರಿಯೆಗೆ ಬೇಕಾದ ಕಾರ್ಬನ್ ಡೈ ಆಕ್ಸೆಡ್‌ನ್ನು ಪ್ರಾಣಿಗಳು ತಮ್ಮ ಉಸಿರಾಟದಿಂದ ನೀಡುತ್ತವೆ. ಹೀಗೆ ಪ್ರಕೃತಿಯಲ್ಲಿ ಸಮತೋಲನ ಕಾಪಾಡುವಲ್ಲಿ ಕಾಡಿನ ಪಾತ್ರವು ಪ್ರಾಮುಖ್ಯವಾದುದು.
5. ಕಾಡಿನಲ್ಲಿ ಯಾವುದೂ ವ್ಯರ್ಥವಲ್ಲ. ಏಕೆ ? ವಿವರಿಸಿ.
ಕಾಡಿನಲ್ಲಿ ಯಾವುದೂ ವ್ಯರ್ಥವಲ್ಲ ಏಕೆಂದರೆ ಸತ್ತ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳಿಂದ ಹ್ಯೂಮಸ್ ಉತ್ಪತ್ತಿಯಾಗಿ ಇದು ಮಣ್ಣಿಗೆ ಬಿಡುಗಡೆಯಾಗುತ್ತದೆ. ಈ ಪೋಷಕಗಳು ಜೀವಂತ ಸಸ್ಯಗಳ ಬೇರುಗಳ ಮೂಲಕ ಪುನಃ ಹೀರಲ್ಪಟ್ಟು, ಸಮೃದ್ಧವಾಗಿ ಸಸ್ಯಗಳು ಬೆಳೆಯುತ್ತವೆ. ಪಾಣಿಗಳು ಸತ್ತರೆ ಅದು ರಣಹದ್ದು, ಕಾಗೆ, ನರಿ ಮತ್ತು ಕೀಟಗಳಿಗೆ ಆಹಾರವಾಗುವುದು. ಈ ರೀತಿಯಲ್ಲಿ ಪೋಷಕಗಳು ಚಕ್ರೀಯವಾಗಿ ಬಳಕೆಯಾಗುವುದರಿಂದ ಕಾಡಿನಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ.
6. ಕಾಡಿನಿಂದ ದೊರಕುವ ಐದು ಉತ್ಪನ್ನಗಳನ್ನು ಹೆಸರಿಸಿ.
ಕಾಡಿನಿಂದ ಅನೇಕಾನೇಕ ಉತ್ಪನ್ನಗಳು ದೊರಕುವವು,
ಅವುಗಳಲ್ಲಿ ಪ್ರಮುಖವಾಗಿ
i) ಉರವಲು
ii) ಪೀಠೋಪಕರಣಗಳಿಗೆ ಮರಮುಟ್ಟು
iii) ಔಷಧೀಯ ವಸ್ತುಗಳು
iv) ಪ್ರಾಣಿಗಳ ಮೇವು
v) ಅಂಟು, ಎಣ್ಣೆ, ಸಾಂಬಾರ ಪದಾರ್ಥಗಳು
ಇತ್ಯಾದಿಗಳು
7. ಬಿಟ್ಟ ಸ್ಥಳ ತುಂಬಿ :
ಎ) ಕೀಟಗಳು, ಚಿಟ್ಟೆಗಳು, ಜೇನುನೊಣಗಳು ಮತ್ತು ಪಕ್ಷಿ ಗಳು ಹೂ ಬಿಡುವ ಸಸ್ಯಗಳ ಸಂತಾನೋತ್ಪತ್ತಿ(ಪರಾ ಗಸ್ಪರ್ಶ)ಗೆ ಸಹಾಯ ಮಾಡುತ್ತವೆ.
ಬಿ) ಕಾಡು ಗಾಳಿ ಮತ್ತು ನೀರುಗಳನ್ನು ಶುದ್ದೀಕರಿಸುತ್ತದೆ.
ಸಿ) ಮೂಲಿಕೆಗಳು ಕಾಡಿನಲ್ಲಿ ಅತ್ಯಂತ ಕೆಳ ಸ್ತರವನ್ನು ಪ್ರತಿನಿಧಿಸುತ್ತವೆ.
ಡಿ) ಕೊಳೆಯುತ್ತಿರುವ ಎಲೆಗಳು ಮತ್ತು ಪ್ರಾಣಿಗಳ ಹಿಕ್ಕೆಗಳು ಕಾಡಿನಲ್ಲಿ ಮಣ್ಣನ್ನು ಸಮೃದ್ಧಿಗೊಳಿಸುತ್ತವೆ.
8. ನಮ್ಮಿಂದ ದೂರದಲ್ಲಿರುವ ಕಾಡಿಗೆ ಸಂಬಂಧಪಟ್ಟ ಪರಿಸ್ಥಿತಿ ಮತ್ತು ಅವುಗಳ ಸಮಸ್ಯೆಗಳ ಬಗ್ಗೆ ನಾವು ಏಕೆ ಚಿಂತಿಸಬೇಕು ?
ಏಕೆಂದರೆ ನಾವೂ ಸಹ ಕಾಡಿನಂತೆ ಈ ಭೂಮಿಯ ಮೇಲೆಯೇ ವಾಸಿಸುತ್ತಿದ್ದೇವೆ.
ಕಾಡುಗಳು ನಮಗೆ ಆಕ್ಸಿಜನ್ ಒದಗಿಸುತ್ತವೆ. ಅವು ಮಣ್ಣನ್ನು ರಕ್ಷಿಸುತ್ತವೆ ಮತ್ತು ಅಸಂಖ್ಯಾತ ಪಾಣಿಗಳಿಗೆ ಆವಾಸವಾಗಿವೆ. ಹತ್ತಿರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವಂತೆ ಕಾಡು ಸಹಾಯ ಮಾಡುತ್ತದೆ. ಔಷಧೀಯ ಸಸ್ಯ, ಉರುವಲು, ಮರಮುಟ್ಟು ಮತ್ತು ಇನ್ನೂ ಹಲವು ಉಪಯೋಗಿ ಉತ್ಪನ್ನಗಳ ಆಕರವಾಗಿದೆ. ಆದುದರಿಂದ ನಾವು ನಮ್ಮ ಕಾಡುಗಳನ್ನು ರಕ್ಷಿಸಲೇಬೇಕು.
9. ಕಾಡಿನಲ್ಲಿ ಪ್ರಾಣಿ ಮತ್ತು ಸಸ್ಯಗಳ ವೈವಿಧ್ಯತೆಯ ಅವಶ್ಯಕತೆ ಇದೆ. ಏಕೆ ? ವಿವರಿಸಿ.
ಕಾಡುಗಳಲ್ಲಿ ವೈವಿಧ್ಯಮಯವಾದ ಹಲವಾರು ಸಸ್ಯಗಳು ಬೆಳೆಯುವುದರಿಂದ ಸಸ್ಯಹಾರಿ ಪಾಣಿಗಳಿಗೆ ಹೇರಳವಾಗಿ ಆಹಾರ ದೊರಕುತ್ತವೆ. ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾದಂತೆ, ಅವುಗಳ ಮೇಲೆ ಅವಲಂಬಿಸಿದ ಮಾಂಸಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತದೆ. ವಿಶಾಲವಾದ ಕಾಡು ಪುನರುತ್ಪತ್ತಿಯಾಗಲು ಮತ್ತು ಬೆಳೆಯಲು ಪ್ರಾಣಿ ವೈವಿಧ್ಯವು ಸಹಾಯ ಮಾಡುತ್ತದೆ. ವಿಘಟಕಗಳು ಕಾಡಿನಲ್ಲಿ ಬೆಳೆಯುವ ಸಸ್ಯಗಳಿಗೆ ಪೋಷಕಗಳನ್ನು ಒದಗಿಸಲು ಸಹಾಯ ಮಾಡುತ್ತವೆ. ಈ ರೀತಿ ಕಾಡಿಗೆ ಸಸ್ಯಗಳ ಮತ್ತು ಪ್ರಾಣಿ ವೈವಿಧ್ಯತೆಯ ಅವಶ್ಯಕತೆಯಿದೆ
10. ಚಿತ್ರ 17.15ರಲ್ಲಿ ಭಾಗಗಳನ್ನು ಗುರುತಿಸಲು ಮತ್ತು ಬಾಣದ ಗುರುತಿನ ದಿಕ್ಕು ತೋರಿಸಲು ಚಿತ್ರಕಾರನು ಮರೆತಿದ್ದಾನೆ. ಬಾಣದ ಗುರುತಿಗೆ ಸರಿಯಾದ ದಿಕ್ಕು ತೋರಿಸಿ ಮತ್ತು ಕೆಳಗಿನ ಅಂಶಗಳನ್ನು ಉಪಯೋಗಿಸಿ ಕೊಂಡು ಚಿತ್ರದ ಭಾಗಗಳನ್ನು ಗುರ್ತಿಸಿ.
ಮೋಡಗಳು, ಮಳೆ, ವಾತಾವರಣ,
ಕಾರ್ಬನ್ ಡೈ ಆಕ್ಸೆಡ್, ಆಕ್ಸಿಜನ್, ಗಿಡಗಳು, ಪ್ರಾಣಿಗಳು, ಮಣ್ಣು, ಬೇರುಗಳು, ಅಂತರ್ಜಲ ಮಟ್ಟ,
11. ಈ ಕೆಳಗಿನವುಗಳಲ್ಲಿ ಯಾವುದು ಕಾಡಿನ ಉತ್ಪನ್ನವಲ್ಲ?
i) ಅಂಟು
ii) ಅರಗು
ii) ಹಲಗೆ
iv) ಸೀಮೆಎಣ್ಣೆ
ಉತ್ತರ : iv) ಸೀಮೆಎಣ್ಣೆ
12. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ.
1) ಕಾಡುಗಳು ಮಣ್ಣನ್ನು ಸವೆತದಿಂದ ರಕ್ಷಿಸುತ್ತವೆ.
ii) ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಪರಸ್ಪರ
ಅವಲಂಬಿತವಾಗಿಲ್ಲ.
iii) ವಾಯುಗುಣ ಮತ್ತು ಜಲಚಕ್ರಗಳ ಮೇಲೆ ಕಾಡು ಪ್ರಭಾವ ಬೀರುತ್ತದೆ.
iv) ಕಾಡು ಬೆಳೆಯಲು ಮತ್ತು ಪುನರುತ್ಪತ್ತಿಯಾಗಲು ಮಣ್ಣು ಸಹಾಯ ಮಾಡುತ್ತದೆ.
ಉತ್ತರ : ii) ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಪರಸ್ಪರ ಅವಲಂಬಿತವಾಗಿಲ್ಲ.
13. ಸತ್ತ ಸಸ್ಯಗಳ ಮೇಲೆ ಸೂಕ್ಷ್ಮ ಜೀವಿಗಳು ವರ್ತಿಸಿ ಇದನ್ನು ಉತ್ಪತ್ತಿ ಮಾಡುತ್ತವೆ.
i) ಮರಳು
ii) ಅಣಬೆ
iii) ಹ್ಯೂಮಸ್
iv) ಉರುವಲು
ಉತ್ತರ : iii) ಹ್ಯೂಮಸ್
1. ಕಾಡಿನಲ್ಲಿ ಬೆಳೆಯುವ ಕೆಲವು ಮರಗಳ ಹೆಸರುಗಳನ್ನು ತಿಳಿಸಿರಿ.
ಕಾಡಿನಲ್ಲಿ ಅನೇಕ ಜಾತಿಯ ಮರಗಳು ಬೆಳೆಯುತ್ತವೆ. ಅವು ಅಸಂಖ್ಯಾತ ಹಾಗೂ ವಿಧ ವಿಧವಾದ ಕಾಡುಗಳಲ್ಲಿ ವಿಧವಿಧವಾದ ಮರಗಳು ಬೆಳೆಯುತ್ತವೆ. ಕಾಡುಗಳಲ್ಲಿ ಬೆಳೆಯುವ ಕೆಲವು ಮರಗಳು ಸಾಗುವಾನಿ, ತೇಗ, ಬೂರುಗ, ಶೀಶ್ಯಾಮ್, ಬೇವು, ಪಲಾಶ (ಮುತ್ತುಗ), ಅಂಜೂರ, ಕಗ್ಗಲಿ, ನೆಲ್ಲಿ, ಬಿದಿರು, ಕಂಚುವಾಳ(ಮಂದಾರ) ಇತ್ಯಾದಿ.
2. ಕಾಡಿನಲ್ಲಿ ವಾಸಿಸುವ ಕೆಲವು ಪ್ರಾಣಿಗಳನ್ನು ಹೆಸರಿಸಿ.
ಕಾಡಿನಲ್ಲಿ ಅನೇಕ ಜಾತಿಯ ಪ್ರಾಣಿಗಳು ವಾಸಿಸುತ್ತವೆ. ಅವುಗಳಲ್ಲಿ ಕೆಲವು ಕಾಡು ಹಂದಿ, ಕಾಡುಕೋಣ, ನರಿ, ಮುಳ್ಳುಹಂದಿ, ಆನೆ, ಹುಲಿ, ಚಿರತೆ, ಸಿಂಹ ಇತ್ಯಾದಿ.
3. ಕಾಡುಗಳನ್ನು ಶ್ವಾಸಕೋಶಗಳು ಎಂದು ಏಕೆ ಕರೆಯುತ್ತಾರೆ ?
ಕಾಡಿನ ಸಸ್ಯಗಳು ದ್ಯುತಿಸಂಶ್ಲೇಷಣೆಯ ಮೂಲಕ ಆಕ್ಸಿಜನ್ ಅನ್ನು ಬಿಡುಗಡೆ ಮಾಡಿ, ಪ್ರಾಣಿಗಳ ಉಸಿರಾಟಕ್ಕೆ ಆಕ್ಸಿಜನ್ ಅನ್ನು ಒದಗಿಸುತ್ತವೆ, ಹಾಗೆಯೇ ಕಾರ್ಬನ್ ಡೈ ಆಕ್ಸೆಡ್ ಅನ್ನು ಹೀರಿಕೊಂಡು ವಾತಾವರಣದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೆಡ್ ಸಮತೋಲನವನ್ನು ಕಾಪಾಡುವುದರಿಂದ ಕಾಡುಗಳನ್ನು ಶ್ವಾಸಕೋಶಗಳು’ ಎಂದು ಕರೆಯುವರು.
8. ಕಾಡುಗಳು ವಿನಾಶದ ಅಂಚಿಗೆ ಮುಟ್ಟುತ್ತಿರುವ ಕಾರಣ ಗಳೇನು ?
ಕಾಡುಗಳ ವಿನಾಶಕ್ಕೆ ಪ್ರಮುಖವಾದ ಕಾರಣ ಮಾನವನ ದುರಾಸೆ, ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ಧಿಗೊಳ್ಳುತ್ತಿರುವ ವೈಜ್ಞಾನಿಕ ಸಂಶೋಧನೆಗಳಿಂದ ಹೆಚ್ಚು ಹೆಚ್ಚು ಪ್ರದೇಶದ (ಜಾಗದ) ಅವಶ್ಯಕತೆಗಾಗಿ, ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಕೈಗಾರಿಕಾಭಿವೃದ್ಧಿಗಾಗಿ, ಉರುವಲಿಗಾಗಿ, ಕಾಡುಗಳ ಉತ್ಪನ್ನಗಳಿಗಾಗಿ, ಕಾಡ್ಗಚ್ಚಿನಿಂದಾಗಿ ಇತ್ಯಾದಿ ಹಲವಾರು ಕಾರಣಗಳಿಂದಾಗಿ ಕಾಡುಗಳು ಮಾಯವಾಗುತ್ತಿವೆ.
9. ಈಗ ಮನುಷ್ಯರ ಪ್ರಮುಖ ಕರ್ತವ್ಯವೇನು ?
ಕಾಡಿನ ಪ್ರಾಮುಖ್ಯತೆಯನ್ನು ಅರಿತು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕಾಡಿನ ನಾಶದಿಂದ ನಮ್ಮ ನಾಶವೇ ಆಗುವುದೆಂಬ ತಿಳುವಳಿಕೆಯಿಂದ ಕಾಡಿನ ಜೊತೆ ಸಹಬಾಳ್ವೆ ಮಾಡುವ ಮನಸ್ಸು ಮಾಡಿ, ಕಾಡನ್ನು ಸಂರಕ್ಷಿಸಬೇಕು, ಉಳಿಸಿ ಬೆಳೆಸಬೇಕು.
<span;>ತ್ಯಾಜ್ಯ ನೀರಿನ ಕಥೆ
ಅಧ್ಯಾಯ 18
ವಿಜ್ಞಾನ 7ನೇ ತರಗತಿ ಭಾಗ-2
ನೋಟ್ಸ್ ಪ್ರಶ್ನೋತ್ತರಗಳು
1. ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿ :
ಎ) ನೀರಿನ ಶುದ್ದೀಕರಣವು ತ್ಯಾಜ್ಯವಸ್ತುಗಳನ್ನು ಬೇರ್ಪಡಿಸುವ ಒಂದು ಪ್ರಕ್ರಿಯೆಯಾಗಿದೆ.
ಬಿ) ಮನೆಗಳಿಂದ ಬಿಡುಗಡೆಯಾದ ತ್ಯಾಜ್ಯ ನೀರನ್ನು ಚರಂಡಿನೀರು ಎನ್ನುವರು.
ಸಿ) ಒಣಗಿದ ಕೆಸರನ್ನು ಗೊಬ್ಬರವಾಗಿ ಬಳಸಲಾಗುತ್ತದೆ.
ಡಿ) ಚರಂಡಿಗಳು ಅಡುಗೆ ಎಣ್ಣೆ ಮತ್ತು ಕೊಬ್ಬಿನ ಪದಾರ್ಥ ಗಳಿಂದ ಕಟ್ಟಿಕೊಳ್ಳುತ್ತವೆ.
2. ಚರಂಡಿ ನೀರು ಎಂದರೇನು ? ಸಂಸ್ಕರಿಸದ ಚರಂಡಿ ನೀರನ್ನು ನದಿ ಮತ್ತು ಸಮುದ್ರಗಳಿಗೆ ಬಿಡುವುದು ಹಾನಿಕಾರಕ. ಏಕೆ ? ವಿವರಿಸಿ.
ಮನೆ ಕೈಗಾರಿಕೆ, ಆಸ್ಪತ್ರೆ, ಕಛೇರಿ ಮತ್ತು ಇತರ ಬಳಕೆಗಳಿಂದ ಹೊರಬರುವ ತ್ಯಾಜ್ಯ ನೀರೇ ಚರಂಡಿ ನೀರು. ಸಂಸ್ಕರಿಸದ ಚರಂಡಿ ನೀರನ್ನು ನದಿ ಮತ್ತು ಸಮುದ್ರಗಳಿಗೆ ಬಿಡುವುದು ಹಾನಿಕಾರಕ ಏಕೆಂದರೆ ಇದರಲ್ಲಿ ತೇಲಾಡುವ ಘನವಸ್ತುಗಳು, ಸಾವಯವ ಮತ್ತು ನಿರವಯವ ಕಲ್ಮಶಗಳು, ಪೋಷಕಗಳು, ಕೊಳೆತಿನಿ ಮತ್ತು ರೋಗಕಾರಕ ಬ್ಯಾಕ್ಟಿರಿಯಾಗಳು ಹಾಗೂ ಇತರ ಸೂಕ್ಷ್ಮ ಜೀವಿಗಳನ್ನು ಹೊಂದಿರುತ್ತವೆ.
3.ತೈಲ ಮತ್ತು ಕೊಬ್ಬಿನ ಪದಾರ್ಥಗಳನ್ನು ಚರಂಡಿಗಳಿಗೆ ಬಿಡಬಾರದು ಏಕೆ ? ವಿವರಿಸಿ.
ತೈಲ ಮತ್ತು ಕೊಬ್ಬಿನ ಪದಾರ್ಥಗಳು ಚರಂಡಿಯ ಕೊಳವೆಗಳನ್ನು ಜಿಗುಟಾಗಿಸಿ ಅದು ಕಟ್ಟಿಕೊಳ್ಳುವಂತೆ ಮಾಡುತ್ತವೆ. ತೆರೆದ ಚರಂಡಿಗಳಲ್ಲೂ ಸಹ ಈ ಪದಾರ್ಥಗಳು ಮಣ್ಣಿನ ರಂಧ್ರಗಳನ್ನು ತಡೆದು, ನೀರಿನ ಸೋಸುವಿಕೆಯ ಸಾಮರ್ಥ್ಯವನ್ನು ಕಡಿಮೆಗೊಳಿಸುವುದರಿಂದ ಇದನ್ನು ಚರಂಡಿಗೆ ಹಾಕಬಾರದು.
4. ತ್ಯಾಜ್ಯ ನೀರಿನಿಂದ ಸ್ವಚ್ಛ ನೀರನ್ನು ಪಡೆಯಲು ಅನುಸರಿಸುವ ಹಂತಗಳನ್ನು ವಿವರಿಸಿ.
ತ್ಯಾಜ್ಯ ನೀರಿನ ಸಂಸ್ಕರಣೆಯು ಭೌತಿಕ, ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳನ್ನೊಳಗೊಂಡಿದೆ. ಈ ಸಂಸ್ಕರಣೆಯಲ್ಲಿ ನೀರನ್ನು ಕಲುಷಿತಗೊಳಿಸುವ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಪದಾರ್ಥಗಳನ್ನು ತೆಗೆದು ಹಾಕುತ್ತದೆ.
ಮೊದಲ ಹಂತ : ತ್ಯಾಜ್ಯ ನೀರನ್ನು ಸರಳುಗಳ ಪರದೆಯ ಮೂಲಕ ಹಾಯಿಸಲಾಗುತ್ತದೆ. ಇದರಿಂದ ಚಿಂದಿ ಬಟ್ಟೆ, ಕಡ್ಡಿಗಳು, ತಗಡಿನ ಡಬ್ಬಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ನ್ಯಾಪ್ಟಿನ್‌ಗಳಂತಹ ದೊಡ್ಡ ವಸ್ತುಗಳನ್ನು ಬೇರ್ಪಡಿಸ ಲಾಗುವುದು.
ಎರಡನೆಯ ಹಂತ : ನಂತರ ಈ ನೀರನ್ನು ಕಲ್ಲಿನ ಚೂರು ಮತ್ತು ಮರಳುಗಳ ತೊಟ್ಟಿಗೆ ಹಾಯಿಸುತ್ತಾರೆ. ಇಲ್ಲಿ ತ್ಯಾಜ್ಯ ನೀರಿನ ರಭಸವನ್ನು ಕಡಿಮೆ ಮಾಡಿರುತ್ತಾರೆ.
ಮೂರನೆಯ ಹಂತ : ನಂತರ ನೀರನ್ನು ಮಧ್ಯ ಭಾಗದಲ್ಲಿ ಇಳಿಜಾರಿನಂತಿರುವ ದೊಡ್ಡ ತೊಟ್ಟಿಯಲ್ಲಿ ನಿಲ್ಲುವಂತೆ ಮಾಡಲಾಗುತ್ತದೆ. ಚರಟದಂಥ ಘನ ಪದಾರ್ಥವು ತಳದಲ್ಲಿ ಉಳಿಯುತ್ತದೆ. ಅನಂತರ ಅದನ್ನು ಕೆರೆಯುವ ಸಾಧನದಿಂದ ಬೇರ್ಪಡಿಸಲಾಗುತ್ತದೆ. ಇದು ಕೆಸರು ಅಥವಾ ರಾಡಿ ಆಗಿರುತ್ತದೆ. ತೈಲ ಮತ್ತು ಗ್ರೀಸ್‌ನಂತಹ ತೇಲುವ ಪದಾರ್ಥಗಳನ್ನು ಜಾಲರಿಯಿಂದ ತೆಗೆಯಲಾಗುತ್ತದೆ. ಈಗ ದೊರೆತ ನೀರನ್ನು ತಿಳಿಯಾದ ನೀರು ಎನ್ನುವರು.
ನಾಲ್ಕನೆಯ ಹಂತ : ತಿಳಿಯಾದ ನೀರಿನೊಳಗೆ ವಾಯುವಿಕ ಬ್ಯಾಕ್ಟಿರಿಯಾ ಬೆಳೆಯುವಂತೆ ಮಾಡಲು ಗಾಳಿಯನ್ನು ಊದಲಾಗುತ್ತದೆ. ತಿಳಿನೀರಿನಲ್ಲಿ ಇನ್ನೂ ಉಳಿದಿರುವ ಮಾನವ ತ್ಯಾಜ್ಯ ತ್ಯಾಜ್ಯ ಮತ್ತು ಇತರ ಅನಗತ್ಯ ಪದಾರ್ಥಗಳನ್ನು ಬ್ಯಾಕ್ಟಿರಿಯಾಗಳು ಸೇವಿಸುತ್ತವೆ. ಕೆಲವು ಗಂಟೆಗಳ ಬಳಿಕ ತೇಲಾಡುವ ಸೂಕ್ಷ್ಮ ಜೀವಿಗಳು ತೊಟ್ಟಿಯ ತಳಭಾಗದಲ್ಲಿ ಪಟುಕೃತ ಕೆಸರಾಗಿ ಸಂಗ್ರಹವಾಗುತ್ತವೆ. ನಂತರ ನೀರನ್ನು ಮೇಲ್ಬಾಗದಿಂದ ಬೇರ್ಪಡಿಸಲಾಗುವುದು.
ಪಟುಕೃತ ಕೆಸರಿನಲ್ಲಿ ಶೇ. 97ರಷ್ಟು ನೀರು ಇರುತ್ತದೆ. ನೀರನ್ನು ಮರಳಿನ ಒಣ ಹಾಸಿನಿಂದ ಅಥವಾ ಯಂತ್ರಗಳ ಮೂಲಕ ಬೇರ್ಪಡಿಸಲಾಗುವುದು.
5. ಕೆಸರು ಎಂದರೇನು ? ಇದನ್ನು ಹೇಗೆ ಸಂಸ್ಕರಿಸಲಾ ಗುತ್ತದೆ ವಿವರಿಸಿ.
ದೊಡ್ಡ ತೊಟ್ಟಿಯಲ್ಲಿ ಉಳಿದ ಚರಟದಂತಹ ಘನ ಪದಾರ್ಥಗಳನ್ನು ಕೆರೆಯುವ ಸಾಧನದಿಂದ ಬೇರ್ಪಡಿಸಿರುವ ವಸ್ತುವನ್ನು ಕೆಸರು ಅಥವಾ ರಾಡಿ ಎನ್ನುವರು.
ರಾಡಿಯನ್ನು ಬೇರೆ ತೊಟ್ಟಿಗೆ ವರ್ಗಾಯಿಸಿ, ಅಲ್ಲಿ ಅವಾಯುಕ ಬ್ಯಾಕ್ಟಿರಿಯಾಗಳಿಂದ ಕ್ರಿಯೆಯಲ್ಲಿ ಬಿಡುಗಡೆಯಾದ ಜೈವಿಕ ಅನಿಲವನ್ನು ಇಂಧನವಾಗಿ ಉಪಯೋಗಿಸಲಾಗುತ್ತದೆ ಅಥವಾ ವಿದ್ವತ್ ತುಲ್ಲಿ ಬಳಸಲಾಗುತ್ತದೆ.
6. ಮಾನವನ ಸಂಸ್ಕರಿಸದ ಮಲಮೂತ್ರವು ಆರೋಗ್ಯಕ್ಕೆ ಆಪಾಯಕಾರಿ. ವಿವರಿಸಿ.
ಮಾನವರ ಸಂಸ್ಕರಿಸ ಮಲಮೂತ್ರ ಆರೋಗ್ಯಕ್ಕೆ ಅಪಾಯಕಾರಿ ಇದು ನೀರಿನ ಮಾಲಿನ್ಯ ಮತ್ತು ಭೂ ಮಾಲಿನ್ಯವನ್ನು ಉಂಟುಮಾಡುಬಲ್ಲದು. ಇದರಿಂದ ಭೂಮಿಯ ಮೇಲಿನ ನೀರು ಮತ್ತು ಅಂತರ್ಜಲ ಎರಡೂ ಮಲಿನಗೊಳ್ಳುತ್ತದೆ. ಅಂತರ್ಜಲವು ಬಾವಿ, ಕೊಳವೆ ಬಾವಿ ಮತ್ತು ಆನೇಕ ನದಿಗಳ ನೀರಿನ ಆಕರವಾಗಿರುವುದರಿಂದ ಇವುಗಳ ನೀರನ್ನು ಬಳಸಿದಾಗ ಸಾಮಾನ್ಯವಾಗಿ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗುತ್ತದೆ, ಆ ಖಾಯಿಲೆಗಳು ಕಾಲವಾ ಟೈಫಾಯಿಡ್, ಪೋಲಿಯೋ, ಮಿದುಳುಜ್ವರ, ಹೆಪಟೈಟೀಸ್ ಮತ್ತು ಭೇದಿ ಇತ್ಯಾದಿಗಳು,
7. ನೀರಿನ ಸೋಂಕು ನಿವಾರಿಸಲು ಬಳಸುವ ಎರಡು ರಾಸಾಯನಿಕಗಳನ್ನು ಹೆಸರಿಸಿ.
ನೀರಿನ ಸೋಂಕು ನಿವಾರಿಸಲು ಕ್ಲೋರಿನ್ ಮತ್ತು ಓಜೋನ್‌ಗಳನ್ನು ಬಳಸುತ್ತಾರೆ.
8. ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರದಲ್ಲಿ ಸರಳುಗಳ ಪರದೆಯ ಕಾರ್ಯವನ್ನು ವಿವರಿಸಿ.
ತ್ಯಾಜ್ಯ ನೀರನ್ನು ಸರಳುಗಳ ಪರದೆಯ ಮೂಲಕ ಹಾಯಿಸಿದಾಗ, ಅದರಲ್ಲಿರುವ ದೊಡ್ಡ ದೊಡ್ಡ ತೇಲುವ ವಸ್ತುಗಳಾದ ಚಿಂದಿ ಬಟ್ಟೆ, ಕಡ್ಡಿಗಳು, ತಗಡಿನ ಡಬ್ಬಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ನ್ಯಾಪ್ಟಿನ್‌ಗಳಂತಹ ವಸ್ತುಗಳು ಬೇರ್ಪಡುತ್ತವೆ.
9. ನೈರ್ಮಲ್ಯ ಮತ್ತು ರೋಗಗಳ ನಡುವಿನ ಸಂಬಂಧವನ್ನು ವಿವರಿಸಿ.
ನೈರ್ಮಲ್ಯವೆಂದರೆ ಮಲಿನರಹಿತವಾದ ವಾತಾವರಣವನ್ನು ಸೃಷ್ಟಿಸುವುದು ಇದರಿಂದ ಎಲ್ಲರೂ ಆರೋಗ್ಯವಾಗಿರ ಬಹುದು, ಆರೋಗ್ಯ ಹಾನಿಯಾಗುವುದು ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ಸಂಸ್ಕರಿಸದೆ ವಿಲೇವಾರಿ ಮಾಡುವುದರಿಂದ ಸಂಭವಿಸುತ್ತದೆ. ನೈರ್ಮಲ್ಯ ಮತ್ತು ರೋಗಗಳಿಗೆ ನೇರ ಸಂಬಂಧವಿದೆ.
ಕಳಪೆ ನೈರ್ಮಲ್ಯ ಮತ್ತು ಕಲುಷಿತವಾದ ಕುಡಿಯುವ ನೀರು ಹೆಚ್ಚಿನ ಸಂಖ್ಯೆಯ ರೋಗಗಳಿಗೆ ಕಾರಣವಾಗುತ್ತದೆ. ಸಂಸ್ಕರಿಸದ ತ್ಯಾಜ್ಯ ವಸ್ತುಗಳಿಂದ ಭೂಮಾಲಿನ್ಯ ಮತ್ತು ಜಲ ಮಾಲಿನ್ಯವುಂಟಾಗಿ ರೋಗಗಳು ಬೇಗ ಹರಡುತ್ತವೆ.
10. ನೈರ್ಮಲ್ಯತೆಗೆ ಸಂಬಂಧಿಸಿದಂತೆ ಸಕ್ರಿಯ ನಾಗರಿಕರಾಗಿ ನಿಮ್ಮ ಪಾತ್ರವನ್ನು ಸಂಕ್ಷಿಪ್ತವಾಗಿ ವಿವರಿಸಿ.
ಸಕ್ರಿಯವಾಗಿ ನಾಗರಿಕರಾಗಿ ನಾವು ಉತ್ಪಾದಿಸುವ ತ್ಯಾಜ್ಯದ ಪ್ರಮಾಣವನ್ನು ಮಿತಿಗೊಳಿಸಬಹುದು, ನಗರ ಸಭೆ ಅಥವಾ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಿ ತೆರೆದ ಚರಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಬೇಕು. ಯಾವುದೇ ಮನೆಯ ಚರಂಡಿ ನೀರಿನಿಂದ ನೆರೆಹೊರೆಯಲ್ಲಿ ಗಲೀಜು ಉಂಟಾದರೆ, ಇತರರ ಆರೋಗ್ಯದ ಬಗ್ಗೆ ಯೋಚಿಸಲು ಆ ಮನೆಯವರನ್ನು ವಿನಂತಿಸಿಕೊಳ್ಳಬೇಕು. ನಮ್ಮ ನೆರೆ ಹೊರೆಯಲ್ಲಿ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮದೆಂದು ತಿಳಿದು ವರ್ತಿಸಬೇಕು. ಸ್ವಚ್ಛ ಭಾರತ” ಮಿಷನ್ನಿನ ಗುರಿಯನ್ನು ಈಡೇರುವಂತೆ ಮಾಡಬೇಕು.