9 ನೇ ತರಗತಿಯ ಪಠ್ಯಪೂರಕ ಅಧ್ಯಯನ ಎಲ್ಲಾ ಪಾಠಗಳು ಮತ್ತು ಪದ್ಯಗಳ ಪ್ರಶ್ನೆ ಉತ್ತರಗಳು ಟಿಪ್ಪಣಿಗಳು ಸಾರಾಂಶ ಲೇಖಕರ ಪರಿಚಯ ನಿಮಗೆ ಬೇಕಾದಷ್ಟು ಪಿಡಿಎಫ್‌ನಲ್ಲಿ ಲಭ್ಯವಿದೆ ಈ ಕೆಳಗಿನ ನೀಲಿ ಅಕ್ಷರಗಳನ್ನು ಒತ್ತಿರಿ.
ಒಂಬತ್ತನೇ ತರಗತಿ ಪಠ್ಯಪೂರಕ ಅಧ್ಯಯನ ಸಂಪೂರ್ಣ ಟಿಪ್ಪಣಿಗಳು pdf .
ಪೂರಕ ಪಾಠ ಒಂದು
ಗುಣಸಾಗರಿ ಪಂಡರಿಬಾಯಿ
ಲೇಖಕಿಯ ಪರಿಚಯ:
ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದರು. ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ’ ಈ ವಿಷಯದಲ್ಲಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.
ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಇವರ ತಾಯಿಸಾಹೇಬ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ, ಈ ಚಿತ್ರದಲ್ಲಿನ ಅಭಿನಯಕ್ಕೆ ವಿಶೇಷ ರಾಷ್ಟ್ರಪ್ರಶಸ್ತಿ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಚಿತ್ರ ಎಂದು ಫಿಲ್ಮಫೇರ್ ಪ್ರಶಸ್ತಿ- ಹೀಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದಲ್ಲದೆ ರಾಜೀವ್‌ಗಾಂಧಿ ರಾಷ್ಟ್ರೀಯ ಸೌಹಾರ್ದ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ಲೋಬಲ್ ಮ್ಯಾನ್ ಪ್ರಶಸ್ತಿ, ಶಾಂತಾರಾಂ ಬಂಗಾರದ ಪದಕ ಬಂದಿದೆ. ಡಾ. ಜಯಮಾಲಾರವರು ಬರೆದಿರುವ ‘ಪಂಡರಿಬಾಯಿ’ ಕೃತಿಯ ಸಂಕ್ಷಿಪ್ತ ರೂಪ ಈ ಪಾಠ.
ಆಶಯಭಾವ:
ಪಂಡರಿಬಾಯಿಯವರ ಸಹೃದಯತೆ, ಕಲಾಪ್ರತಿಭೆ, ಮಾನವೀಯ ಹಾಗೂ ಉದಾತ್ತ ಗುಣಗಳನ್ನು ಪರಿಚಯಿಸುವ ಲೇಖನ ಇದು. ಇಂತಹ ಹಿರಿಯ ನಟಿಯ ಬದುಕು ಕಿರಿಯ ಕಲಾವಿದರಿಗೆ ಆದರ್ಶವಾಗಬೇಕು.
ಅಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಪಂಡರಿಬಾಯಿಯವರ ತಂದೆ-ತಾಯಿಯ ಹೆಸರೇನು?
ಉತ್ತರ: ಪಂಡರಿಬಾಯಿಯವರ ತಂದೆ ರಂಗರಾವ್, ತಾಯಿ ಕಾವೇರಿಬಾಯಿ.
2. ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?
ಉತ್ತರ: ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರ ‘ವಾಣಿ’.
3. ಪಂಡರಿಬಾಯಿ ನಾಟಕರಂಗ ಪ್ರವೇಶಿಸಬೇಕಾಗಿ ಬಂದದ್ದೇಕೆ?
ಉತ್ತರ: ಪಂಡರಿಬಾಯಿಯವರ ಅಣ್ಣ ವಿಮಲಾನಂದ “ಆದರ್ಶ ನಾಟಕ ಸಂಘ” ಎಂಬ ನಾಟಕ ಕಂಪನಿ ಸ್ಥಾಪಿಸಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು, ಒಮ್ಮೆ ಮುದುಕನ ಮದುವೆ ನಾಟಕಕ್ಕೆ ತಯಾರಿ ನಡೆದಿತ್ತು. ನಾಟಕ ಪ್ರದರ್ಶನವಾಗಲು ಕೇವಲ ಅರ್ಧಗಂಟೆ ಇರುವಾಗ ನಾಟಕದಲ್ಲಿ ಪಾತ್ರವಹಿಸಿದ್ದ ನಟಿ ‘ಬರುವುದಿಲ್ಲ’ ಎಂಬ ಸುದ್ದಿ ಕಳುಹಿಸಿದಳು. ಆ ಪಾತ್ರವನ್ನು ವಿಮಲಾನಂದರು, ತಂಗಿ ಪಂಡರಿಬಾಯಿಯವರಿಂದ ಮಾಡಿಸಿದರು. ಹೀಗೆ ಪಂಡರಿಬಾಯಿಯವರು ನಾಟಕರಂಗ ಪ್ರವೇಶಿಸಬೇಕಾಗಿ ಬಂದಿತು.
4. ಪಂಡರಿಬಾಯಿಯವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ?
ಉತ್ತರ: ಪಂಡರಿಭಾಯಿಯವರ ಜೀವಮಾನ ಸಾಧನೆಗಾಗಿ ಫಿಲ್ಮಫೇರ್ ಪ್ರಶಸ್ತಿ ನೀಡಲಾಗಿದೆ.
5, ಪಂಡರಿಬಾಯಿಯವರು ಅಮರರಾದರು? ಯಾರ ಮನಸ್ಸಿನಲ್ಲಿ
ಉತ್ತರ: ಪಂಡರಿಬಾಯಿಯವರು ಕಲಾರಸಿಕರ ಮನಸ್ಸಿನಲ್ಲಿ ಅಮರರಾದರು.
6. ಪಂಡರಿಬಾಯಿಯವರು, ನಾಟಕದಲ್ಲಿ ಬಣ್ಣ ಹಚ್ಚಲು ಕಾರಣವೇನು?
ಉತ್ತರ: ‘ವಾಣಿ’ ಚಿತ್ರದಲ್ಲಿ ನಟಿಸಿದ ನಂತರ ಕೆಲವು ವರ್ಷಗಳು ಇವರಿಗೆ ನಟನೆಗೆ ಅವಕಾಶ ಸಿಗಲಿಲ್ಲ. ಆಗ ಇವರು ಮುಂಬಯಿವರೆಗೆ ಪ್ರವಾಸ ಮಾಡಿ ನಾಟಕದಲ್ಲಿ ಆಭಿನಯಿಸಿ ಕುಟುಂಬಕ್ಕೆ ಆಸರೆಯಾಗಿ ನಿಂತರು. ‘ಶ್ರೀಕೃಷ್ಣ ಚೈತನ್ಯ ನಾಟಕ ಸಭಾ’ ಎಂಬ ತಂಡ ಕಟ್ಟಿ ನಾಡಿನಾದ್ಯಂತ ನಾಟಕಗಳನ್ನು ಪ್ರದರ್ಶಿಸಿ ಸಹಕಲಾವಿದರಿಗೆ ನೆರವು ನೀಡಿದರು.
7. ರಂಗರಾವ್ ಅವರು ಮಗಳ ಹೆಸರನ್ನು ಪಂಡರಿಬಾಯಿ
ಎಂದು ಬದಲಾಯಿಸಲು ಕಾರಣವೇನು?
ಉತ್ತರ: ಪಂಡರಿಬಾಯಿಯವರ ಮೂಲ ಹೆಸರು ಗೀತಾ. ಪಂಡರಾಪುರದ ಪಂಡರಿನಾಥನಲ್ಲಿ ಅತೀವ ಶ್ರದ್ಧೆ ಭಕ್ತಿಗಳನ್ನು ಹೊಂದಿದ್ದ ರಂಗರಾವ್, ಮಗಳ ಹೆಸರನ್ನು ಬದಲಾಯಿಸಿದರು.
8. ಪಂಡರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿದ ಅಂಶಗಳು ಯಾವುವು?
ಉತ್ತರ: ಪಂಡರಿಬಾಯಿಯವರ ತಂದೆ ಹರಿದಾಸರಾಗಿದ್ದು, ಹರಿಕಥೆ ಮಾಡುತ್ತಿದ್ದರು. ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ಮನೆಯಲ್ಲಿ ಬಡತನವಿದ್ದರೂ ಅತ್ಯಂತ ಶಿಸ್ತಿನಿಂದ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ನಡೆಯಬೇಕಾಗಿತ್ತು. ಇದರೊಂದಿಗೆ ಪಂಡರಿಬಾಯಿಯವರಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸ ಆಯಿತು. ಇವರೂ ಹರಿಕಥೆ ಮಾಡುತ್ತಿದ್ದರು. ಕೀರ್ತನೆ ಹಾಡುತ್ತಿದ್ದರು. ಮನೆಯಲ್ಲಿದ್ದ ಈ ಸೃಜನಶೀಲ ವಾತಾವರಣ ಪಂಡರಿಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿತು.
ಪೂರಕ ಪಾಠ ಎರಡು
ಹೊಳೆಬಾಗಿಲು
ಲೇಖಕರ ಪರಿಚಯ:
ಕವಿ ಪ್ರಬಂಧಕಾರ ಸುಶ್ರುತ ದೊಡ್ಡೇರಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು, ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ಮೌನಗಾಳ’ ಎಂಬ ಬ್ಲಾಗಿನಲ್ಲಿ ಹಲವು ವರ್ಷಗಳಿಂದ ಬರೆಯುತ್ತಿದ್ದಾರೆ. ಕೃತಿಗಳು ‘ಚಿತ್ರಾಚಾಪ’ “ಹೊಳೆಬಾಗಿಲು”, ಬ್ಲಾಗಿಸು ಕನ್ನಡ ಡಿಂಡಿಮವ’,
ಆಶಯ ಭಾವ
ಬಾಗಿಲೆಂದರೆ, ಬಾಗಿಲಲ್ಲ ಅದು ಮರ, ಕಬ್ಬಿಣ, ತಗಡು, ಫೈಬರ್, ಗಾಜಿನಿಂದಲೇ ತಯಾರಿಕೆಯಾಗಿರಬೇಕೆಂದಿಲ್ಲ. ಅದು ಯಾವುದಾದರೂ ಸರಿ ತೆರೆಯಲು ಮತ್ತು ಮುಚ್ಚಲು ಬರಲೇಬೇಕೆಂದೇನಿಲ್ಲ. ಬಾಗಿಲೆಂದರೆ ಪ್ರವೇಶ ಸ್ಥಾನ ಅಷ್ಟೆ. ಉದಾಹರಣೆಗೆ: ‘ಹೊಳೆಬಾಗಿಲು, ಹೊಳೆಯ ಬಳಿ ಹೋದ ತಕ್ಷಣ ನಾವು ಎಷ್ಟೇ ವೇಗದಲ್ಲಿದ್ದರೂ ಸುಮ್ಮನಿಲ್ಲುತ್ತೇವೆ. ಅದು ಒಂದು ತೆರನಾದ ಬಾಗಿಲೇ ಆಗಿದೆ. ಹೊಳೆಯಲ್ಲಿ ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇರಲು ಲಾಂಚ್ ಅನ್ನು ಬಳಕೆ ಮಾಡಲಾಗುತ್ತದೆ. ಆ ಲಾಂಚಿನ ಕುರಿತ ಈ ಪಠ್ಯದ ಆಶಯವಾಗಿದೆ.
ಪಾಠದ ಸಾರಾಂಶ:
ಬಾಗಿಲೆಂದರೆ ಬಾಗಿಲೇ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ ಅಥವಾ ತಗಡು ಅಥವಾ ಫೈಬರ್ ಅಥವಾ ಗಾಜಿನಿಂದಲೇ ತಯಾರಾಗಿರಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ, ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು ಮುಚ್ಚಲು ಬರಲೇಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ, ಬಾಗಿಲೆಂದರೆ ಪ್ರವೇಶ ಸ್ಥಾನ: ಅಷ್ಟೇ. ಉದಾಹರಣೆಗೆ: ಹೊಳೆಬಾಗಿಲು,
ಹೊಳೆಬಾಗಿಲು ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು. ಹೊಳೆದಂಡೆಯಾಚೆಗೆ ಇನ್ನು ಇದ್ದ ಲಾಂಚಿನ ಕುರಿತು ಮಾತನಾಡುವ ಜನರು, ಬೆಂಕಿ ಪೊಟ್ಟಣದಂತೆ ಕಾಣಿಸುತ್ತಿದೆಯಲ್ಲ ಅದೇ ಲಾಂಚು, ಅದು ಅಲ್ಲಿಂದ ಜನ, ವಾಹನಗಳನ್ನು ಹತ್ತಿಸಿಕೊಂಡು ನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಅಲ್ಲಿಯವರೆಗೆ ನೀನು ಏನು ಹಾರಾಡಿದರೂ ನಡೆಯುವುದಿಲ್ಲ.
ಬೇಕಿದ್ದರೆ ಲಾಂಚು ಬರುವವರೆಗೆ ದಂಡೆಗುಂಟ ಅಡ್ಡಾಡುತ್ತಾ, ಕಪ್ಪೆ ಚಿಪ್ಪು, ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೊಳೆಗೆ ಕಲ್ಲನ್ನು ಎಸೆಯಬಹುದು.ಅಲೆಗಳನ್ನು ನೋಡುತ್ತಾ ಮೈ ಮರೆಯಬಹುದು. ಹೊಳೆಯಲ್ಲಿ ಮೀನು, ‘ಗೊಜಮಂಡೆ’ ಗುಂಪಾಗಿ ಬಂದು ತಲೆ ತೋರಿಸಿ ಹೋಗುವವು. ಮೀನುಗಳಿಗೆ ನಿಮ್ಮ ಬಳಿ ಇರುವ ತಿಂಡಿಗಳನ್ನು ಹಾಕಬಹುದು. ಲಾಂಚು ಬರುವವರೆಗೆ ಮೀನುಗಳ ಜೊತೆ ಆಟವಾಡಬಹುದು.
ಲಾಂಚು ಈಗ ಸಮೀಪಿಸುತ್ತಿದೆ. ಮೊದಲ ಸಲ `ಲಾಂಚು ಹತ್ತುವವರ ಸಂಭ್ರಮ ಕುತೂಹಲಗಳಂತೂ ಹೇಳತೀರದ್ದು. ಅವರು ನೀರಿನ ಸಮೀಪಕ್ಕೆ ನಿಂತಿದ್ದಾರೆ. ಬಸ್ಸನ್ನು ಅದರೊಳಗೆ ಹಾಕುತ್ತಾರೆ? ಅದು ಹೇಗೆ ಲಾಂಚು ಮಧ್ಯದಲ್ಲಿ ಕೆಟ್ಟು ಹೋದರೆ ಗತಿಯೇನು? ಮುಳುಗಿ ಹೋಗುತ್ತಾ? ಅಯ್ಯಯ್ಯೋ! ನಂಗೆ ಈಜು ಬೇರೆ ಬರಲ್ವಲ್ಲಪ್ಪ.
ಲಾಂಚಿನ ಡ್ರೈವರ್, ಎಲ್ಲಿ ಕುಳಿತಿರುತ್ತಾನೆ? ಇದೇ ರೂಟಿನಲ್ಲಿ ಪ್ರತಿ ದಿನವೂ ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವದಿಲ್ಲವಾ? ಪ್ರಶ್ನೆಗಳು ಜೇನ್ನೊಣದಂತೆ ಕಾಡುತ್ತಿರಲು, ಅಗೋ ಲಾಂಚು ಹತ್ತಿರಾಗುತ್ತಿದೆ ದಾರಿ ಬಿಡಿ ಇಲ್ಲಿಗೆ ಬರುತ್ತಿದೆ ಲಾಂಚು.
ಲಾಂಚು ಬಂದು ನಿಂತಿದ್ದೆ ತಡ ಎಲ್ಲರೂ ಹೋಗಿ ಹತ್ತಿದ್ದಾರೆ. ಆ ಮೇಲೆ ವಾಹನಗಳೆಲ್ಲಾ ಒಂದೊಂದಾಗಿ ಬರುತ್ತಿವೆ. ಆದರೆ ಒಂದು ಕಾರಿಗೆ ಮಾತ್ರ ಜಾಗ ಸಿಕ್ಕಿರಲಿಲ್ಲ. ಅದರ ಪರಿಸ್ಥಿತಿ ಸಿನಿಮಾಗೆ ಟಿಕೇಟು ಸಿಗದಿರುವ ಹಾಗೆ ಆಗಿತ್ತು. ಪಾಪ ಮುಂದಿನ ಟ್ರಿಪ್ಪಿನವರೆಗೆ ಕಾಯಬೇಕು.
ಲಾಂಚು ಹೊರಟಿದೆ. ಈಗ ಮೊದಲ ಬಾರಿ ಲಾಂಚು ಹತ್ತಿದವರು ಒಳಗಡೆ ಹೋಗಿ ಕುಳಿತಿದ್ದಾರೆ. ಮೊದಲೇ ಪರಿಚಯ ಇದ್ದವರು, ಲಾಂಚಿನ ಅಂಚಿಗೆ ನಿಂತಿದ್ದಾರೆ . ಅವರಿಗೆ ಲಾಂಚು ಚಲಿಸದೆ ನಿಂತಂತೆ ಭಾಸವಾಗುತ್ತದೆ. ಅಜ್ಜಿಯೊಂದು ಕೈ ಮುಗಿದು ಕಣ್ಮುಚ್ಚಿ ಕುಳಿತಿದೆ. ಸಿಬ್ಬಂದಿ ಟಿಕೇಟು ಕೇಳುತ್ತಾ ಬರುತ್ತಿದ್ದಾನೆ. ಒಳಗಡೆ ಕುಳಿತವರು ಸ್ವಲ್ಪ ಧೈರ್ಯ ಮಾಡಿ, ಬೇಸರಾದ ಮೇಲೆ ಆಚೆ ಬಂದು ಸರಪಳಿ ಅಂಚಿಗೆ ಬಂದು ನಿಲ್ಲುತ್ತಿದ್ದಾರೆ.
ಅಪ್ಪನೊಂದಿಗೆ ಹೊರ ಬಂದ ಮಗ ಕೇಳುತ್ತಾನೆ “ಅಪ್ಪ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು! ಲಾರಿಯಲ್ಲೂ ಹಿಡಿಯುವುದಿಲ್ಲ’ ಅಪ್ಪನಿಗೂ ಈಗ ಯೋಚನೆಯಾಗಿದೆ. ಅಪ್ಪ ಆಗ ಮಗನಿಗೆ ಎಲ್ಲಾ ತಿಳಿದವನಂತೆ “ಸಮುದ್ರದಿಂದ ಡ್ರೈವ್ ಮಾಡಿಕೊಂಡು ಹೇಗೋ ತಂದಿದ್ದಾರೆ’ ಎಂದು ಹೇಳುತ್ತಾನೆ. ಆದರೂ ಅವನಿಗೆ ಈ ಪ್ರಶ್ನೆ ಕಾಡುತ್ತಲೇ ಇದೆ. ಯಾರನ್ನಾದರೂ ಕೇಳೋಣವೆಂದರೆ ಮುಜುಗರವಾಗಿ ಸುಮ್ಮನಾಗಿದ್ದಾನೆ.
ಪ್ರಶಾಂತ ಸಾಗರದಂತಹ ಹೊಳೆಯಲ್ಲಿ ನಿಧಾನವಾಗಿ ಸಾಗುತ್ತಿರಲು ಲಾಂಚು ಸೌಂದರ್ಯದ ಪ್ರಕೃತಿಯನ್ನು ಸವಿಯುತ್ತಾ ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿರಲು ಅಯಾಚಿತವಾಗಿ ನಿಮ್ಮ ನೆನಪಿನ ಕೋಶದಿಂದ ಹೊರಬರುತ್ತದೆ. ಆ ಹಾಡು
ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರದ ಸೇರಲಿ ಬೀಸು ಗಾಳಿಗೆ ಬೀಳುತ್ತೇಳುವ ತೆರೆಯ ಮೇಗಡೆ ಹಾರಲಿ
ಹೊಳೆಬಾಗಿಲಿನಲ್ಲಿ ನಿಮ್ಮ ಮನದ ಬಾಗಿಲು ತೆರೆದು ಕೊಳ್ಳುತ್ತದೆ. ದಡ ಈಗ ಸಮೀಪಿಸುತ್ತಿದೆ. ಹೊಳೆಯ ಅಂಚಿಗೆ ಸೇರಿದ ದಡದ ಅಂಚು ಕಾಣುತ್ತಿದೆ. ಪಯಣ ಮುಗಿದಿದೆ. ಲಾಂಚು ದಡದ ಬಳಿ ಬಂದು ಸೇರಿತು. ದಡದ ಬಳಿ ಲಾಂಚು ಬರುತ್ತಿದ್ದಂತೆ ಆಚೆ ಇದ್ದ ಜನರ ಮೊಗದಲ್ಲಿ ಮುಗುಳ್ನಗೆ ಕಾಣಿಸುತ್ತಿದೆ. ಬೈಕು, ಕಾರು ಸ್ಟಾರ್ಟ್ ಆಗುತ್ತಿವೆ. ಲಾಂಚು ನಿಂತದ್ದೆ ಎಲ್ಲಾ ಆಚೆ ಕಡೆ ಜಿಗಿದಿದ್ದಾರೆ. ಲಾರಿ, ಬೈಕು, ಬಸ್ಸು ಬುರಬುರನೆ ದಡ ಸೇರಿವೆ.
ಎಲ್ಲರೂ ಹೋಟೆಲಿಗೆ ನುಗ್ಗಿದ್ದಾರೆ ಮಾಣಿ ಇವತ್ತು ‘ಏನು ವಿಶೇಷ ಮಾಡಿದ್ರಾ?’ ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ, ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಲ್ಲಿಗೆ ಚದುರಿಹೋಗಿದ್ದವರನ್ನೆಲ್ಲ ಕರೆಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ.
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲಾ ಚಟುವಟಿಕೆಗಳನ್ನು ಮಾಡಬಹುದು?
ಉತ್ತರ: ಲಾಂಚು ಬರುವವರೆಗೆ ದಂಡೆಗುಂಟ ಅಡ್ಡಾಡುತ್ತಾ, ಕಪ್ಪು ಚಿಪ್ಪು, ನುಣ್ಣನೆ ಉರುಟು ಕಲ್ಲುಗಳನ್ನು ಹೆಚ್ಚಬಹುದು, ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿ ಬರುವುದನ್ನು ನೋಡುತ್ತಾ ಮೈ ಮರೆತು ನೋಡಬಹುದು. ಮೀನುಗಳನ್ನು ಗೋಜಮಂಡೆ’ ಎಂದು ಕರೆಯುವ ಕಪ್ಪ ಜಾತಿಯ ಜೀವಿಗಳನ್ನು ನೋಡಬಹುದು. ಮೀನುಗಳಿಗೆ ನೀವು ತಂದ ತಿಂಡಿಯನ್ನು ಹಾಕಬಹುದು. ಅವುಗಳು ಒಮ್ಮೆಲೆ ಬಂದು ತಮ್ಮ ತಲೆಯನ್ನು ತೋರಿಸಿ ಹೋಗುವವು. ನೀವು ಮತ್ಸ್ಯ ಲೋಕದಲ್ಲಿ ಒಂದಾಗಬಹುದು.
2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ?
ಉತ್ತರ: ಲಾಂಚು ದಡಕ್ಕೆ ಬಂದು ನಿಂತಾಗ, ಮೊದಲ ಬಾರಿ ಲಾಂಚು ಹತ್ತುವವರ ಒಂದು ಸಂಭ್ರಮ ಕುತೂಹಲ ಗಳಂತೂ ಹೇಳ ತೀರದ್ದು. ಬಂದು ನಿಂತಿದ್ದೆ ತಡ ಎಲ್ಲರೂ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ಒಂದೊಂದಾಗಿ ವಾಹನಗಳನ್ನು ಹತ್ತಿಸುತ್ತಾರೆ. ಕೆಲವೊಮ್ಮೆ ಒಂದೊಂದು ವಾಹನಕ್ಕೆ ಜಾಗ ಇಲ್ಲದೆ ಅಲ್ಲೇ ಉಳಿಯುವ ಪರಿಸ್ಥಿತಿಯು ಬರುತ್ತದೆ. ಆಗ ಸಿನಿಮಾಕ್ಕೆ ಟಿಕೇಟು ಸಿಗದಂತೆ ಅದರ ಪರಿಸ್ಥಿತಿ ಆಗಿರುತ್ತದೆ. ನಂತರ ಮುಂದಿನ ಟ್ರಿಪ್ಪಿನವರೆಗೆ ಕಾಯಬೇಕಾಗುತ್ತದೆ. ಆದ ಕಾರಣ ಎಲ್ಲರೂ ಲಾಂಚು ಬಂದು ದಡ ಸೇರುತ್ತಿದ್ದಂತೆ ಗಡಿಬಡಿಯಿಂದ ಹತ್ತಲು ಮುಂದಾಗುವರು.
3. ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ಏನೇನು ಮಾತುಕತೆಗಳು ನಡೆದಿರುತ್ತವೆ?
ಉತ್ತರ: ಲಾಂಚು ಹೊರಟಿದೆ. ಈಗ ಲಾಂಚಿನ ಸಿಬ್ಬಂದಿಯೊಬ್ಬ ಟಿಕೇಟು ಕೇಳುತ್ತಾ ಬರುತ್ತಿದ್ದಾನೆ. ಲಾಂಚಿನ ಪರಿಚಯವಿದ್ದವರೆಲ್ಲ ಧೀರರಂತೆ ಅಂಚಿಗೆ ಹೋಗಿ ಸರಪಳಿಗೆ ಒರಗಿ ನಿಂತಿದ್ದಾರೆ. ಮೊದಲ ಬಾರಿ ಲಾಂಚಿಗೆ ಬಂದವರು ಒಳಗಡೆ ಹೋಗಿ ಕುಳಿತಿದ್ದಾರೆ. ಅವರಿಗೆ ಲಾಂಚು ಚಲಿಸುತ್ತಿದ್ದರೂ ನಿಂತಂತೆ ಭಾಸವಾಗುತ್ತಿದೆ. ಆಜ್ಜಿಯೊಂದು ಕೈ ಮುಗಿದು ಕಣ್ಮುಚ್ಚಿ ಕುಳಿತಿದೆ. ‘ದೇವರೆ ಸುಖವಾಗಿ ಆಚೆ ದಡ ಸೇರಿಸಪ್ಪಾ’ ಒಳಕುಂತವರೆಲ್ಲಾ ಸ್ವಲ್ಪ ಧೈರ್ಯ ಬಂದು ಬೇಸರವಾದ ಮೇಲೆ ಆಚೆ ಬರುತ್ತಾರೆ. ಕಂಬಿಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅರೆ! ಲಾಂಚಿನಲ್ಲಿ ‘ಜಂಪ್ಸ್’ ಆಗುವುದೇ ಇಲ್ಲ! ಈಗ ಅವರು ಕೈ ಬಿಟ್ಟು ನಡೆದಿದ್ದಾರೆ.
ಅಪ್ಪನೊಂದಿಗೆ ಹೊರ ಬಂದ ಮಗನು ಕೇಳುತ್ತಾನೆ ಅಪ್ಪಾ, ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ’ ಅಪ್ಪನಿಗೂ ಈಗ ಯೋಚನೆಯಾಗಿದೆ ಅರೆ! ಹೌದಲ್ಲಾ ಇಷ್ಟು ದೊಡ್ಡ ಲಾಂಚನ್ನು ಹೇಗೆ ತಂದರು. ಆತ ಎಲ್ಲಾ ತಿಳಿದವನಂತೆ ಇದು ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳುತ್ತಾನೆ.
ಆದರು ಅವನಿಗೆ ಈ ಪ್ರಶ್ನೆ ಕಾಡುತ್ತಲೆ ಇರುತ್ತದೆ. ಯಾರಿಗಾದರೂ ಕೇಳೋಣವೆಂದರೆ ಮುಜುಗರ, ಹಾಗಾಗಿ ಸುಮ್ಮನಾಗಿಬಿಡುತ್ತಾನೆ. ಈ ರೀತಿಯಾಗಿ ಲಾಂಚಿನಲ್ಲಿ ಏನೇನು ಹತ್ತು ಹಲವು ಮಾತುಕತೆಗಳು ನಡೆಯುತ್ತವೆ.
4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರ ಬರುತ್ತಾರೆ?
ಉತ್ತರ: ಲಾಂಚು ತನ್ನ ಪಯಣ ಮುಗಿಸಿದಾಗ ಬಂದು ದಡವನ್ನು ಸೇರುವುದೇ ತಡ ಜನರೆಲ್ಲರೂ ಆಚೆ ಜಿಗಿದು ತಮ್ಮ ತಮ್ಮ ಕೆಲಸಗಳಿಗೆ ಸರಸರನೆ ಹೋಗುವರು. ಬಸ್ಸು, ಕಾರು, ಲಾರಿ ಮುಂತಾದವುಗಳು ಆಚೆ ಬರುವವು. ಎಲ್ಲರೂ ಹೋಟೆಲ್ಲಿಗೆ ನುಗ್ಗುವರು, ‘ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ?’ ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ, ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಲ್ಲಿಗೆ ಚದುರಿಹೋಗಿದ್ದವರನ್ನೆಲ್ಲ ಕರೆಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ.
5. ಹೊಳೆ ಮತ್ತು ಲಾಂಚಿನ ಒಟ್ಟಾರೆ ದಿನಚರಿಯ ಬಗ್ಗೆ ಲೇಖಕರ ಅನಿಸಿಕೆಯೇನು?
ಉತ್ತರ: ಕವಿ, ಪ್ರಬಂಧಕಾರ ಸುಶ್ರುತ ದೊಡ್ಡೇರಿಯವರು ‘ಹೊಳೆಬಾಗಿಲು’ ಎಂಬ ಪಠ್ಯವನ್ನು ಬಾಗಿಲೆಂದರೆ ಬಾಗಿಲೆ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ, ಗಾಜು, ಫೈಬರ್, ತಗಡುಗಳಿಂದ ತಯಾರಾಗಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ – ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು ಮುಚ್ಚಲು ಬರಲೇಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ ಬಾಗಿಲೆಂದರೆ ಪ್ರವೇಶಸ್ಥಾನ ಅಷ್ಟೆ. ಉದಾಹರಣೆಗೆ ಹೊಳೆಬಾಗಿಲು.
ಹೊಳೆಬಾಗಿಲೆಂದರೆ ಹೊಳೆಯ ಸುತ್ತಲೂ ಗೋಡೆ ಕಟ್ಟಿ ಕದವನ್ನಿಟ್ಟಿಲ್ಲ. ಹಾಗಂತ ಗೋಡೆಗಳಿದ್ದರೆ ಮಾತ್ರ ಬಾಗಿಲು ಇರಬೇಕು ಎಂದೇನಿಲ್ಲ? ಹೊಳೆಗೆಂಥಾ ಬಾಗಿಲು? ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು.
ಹೊಳೆಯು ಪ್ರತಿದಿನ ಲಾಂಚನ್ನು ಹೊತ್ತುಕೊಂಡು ಒಂದು ದಡದಿಂದ ಮತ್ತೊಂದು ದಡಕ್ಕೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಸೇರಿಸುವ ಕಾರ್ಯವನ್ನು ಮಾಡುವುದು. ಹೊಳೆಯು ಸ್ವಚ್ಛಂದ, ಸುಂದರವಾಗಿ ತನ್ನ ಸೌಂದರ್ಯೋ ಪಾಸನೆಯನ್ನು ಜನರಿಗೆ ತೋರಿಸುವಂತದ್ದು ಹೊಳೆಯು ಮೀನುಗಳಿಗೆ, ಜಲಚರಗಳಿಗೆ ಮತ್ತು ಕಪ್ಪೆಯಂತಹ ಕ್ರಿಮಿಕೀಟಗಳಿಗೆ ವಾಸಸ್ಥಳವಾಗಿದೆ. ಲಾಂಚು ಬರುವ ವರೆಗೆ ಪ್ರಯಾಣಿಕರಿಗೆ ಸಮಯ ಕಳೆಯಲು ಈ ಹೊಳೆಯು ಒಂದು ಅನುಕೂಲವಾಗಿದೆ. ಅದರಲ್ಲಿ ಕಲ್ಲು ಹಾಕುವುದು, ಅಲೆಗಳನ್ನು ನೋಡುವುದು. ಒಟ್ಟಾರೆ ಹೊಳೆಯು ತನ್ನ ಸೊಬಗನ್ನು ತೋರಿಸುತ್ತದೆ.
ಲಾಂಚು ಪ್ರಯಾಣಿಕರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸೇರಿಸುವ ಪ್ರಯತ್ನವನ್ನು ಮಾಡುತ್ತದೆ. ಲಾಂಚಿನಲ್ಲಿ ಮೊದಲು ಪ್ರಯಾಣಿಸುವವರ ಅನುಭವ ಮತ್ತು ಮೊದಲೇ ಪ್ರಯಾಣಿಸಿದವರ ಅನುಭವ. ಇದರಲ್ಲಿ ಕಾಣಬಹುದು. ಒಟ್ಟಾರೆಯಾಗಿ ಕವಿಯು ಒಂದು ಲಾಂಚಿನ ಚಿತ್ರಣವನ್ನು ವಿವರಿಸಿದ್ದಾರೆ.
ಪೂರಕ ಪಾಠ ಮೂರು
ನನ್ನಾಸೆ
ಲೇಖಕಿಯ ಪರಿಚಯ
1959ರಲ್ಲಿ. ಇವರು ಜನಿಸಿದ್ದಾರೆ. ಇಂದುಮತಿ ಲಮಾಣಿಯವರು ವಿಜಯಪುರ ಜಿಲ್ಲೆಯವರು. ಕೃತಿಗಳು, ‘ತಾಯಿಲೋಕ’, ‘ಭಾವಲೋಕ’, ‘ಏಕಾದಶ’, “ಕೊರಡು ಕೊನರುವುದು ಬರಡುಹಯನಹುದು? ಮುಂತಾದವು.
ಪ್ರಶಸ್ತಿ: ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಮೈತ್ರೇಯಿ ಪ್ರಶಸ್ತಿ, ಡಾಟರ್ ಆಫ್ ನೈಲ್ ಪ್ರಶಸ್ತಿ ಮುಂತಾದವು.
ಪದ್ಯದ ಸಾರಾಂಶ:
ಜೀವನದಲ್ಲಿ ತಾನು ಗೆದ್ದು, ಮುಂದೆ ಬರಬೇಕೆಂಬ ಆಸೆಯನ್ನು ಲೇಖಕಿ ಇಲ್ಲಿ, ವ್ಯಕ್ತಪಡಿಸಿದ್ದಾರೆ. ತನಗೆ ತೊಂದರೆಯಾದರೂ, ಆ ತೊಂದರೆಯನ್ನು ಮೆಟ್ಟಿ ನಿಂತು ಬೇರೊಬ್ಬರಿಗೆ ನೆರವು ನೀಡುವ ನಿಸ್ವಾರ್ಥ ವ್ಯಕ್ತಿತ್ವ ತನ್ನದಾಗಬೇಕೆಂದು ಆಸೆ ಪಡುತ್ತಾರೆ.
ತನ್ನನ್ನು ತಾನು ಸುಟ್ಟು ಬೆಳಕು ನೀಡುವ ಬತ್ತಿ ತಾನಾಗಬೇಕು. ಮಣ್ಣಲ್ಲಿ ಮಣ್ಣಾಗಿ, ಮಣ್ಣ ಮೇಲೊಂದು ಮರವಾಗಿ ಪುಣ್ಯವಂತರಿಗೆ ನೆರಳು ನೀಡುವ ಮರದಂತೆ ತಾನು ನಿಸ್ವಾರ್ಥವಾಗಿ ಬದುಕಬೇಕು,
ಎಂದಿಗೂ ಬತ್ತದ ಒರತೆಯಾಗಬೇಕು; ಸದಾ ಚಿಲುಮೆ ಯಂತೆ ಚಿಮ್ಮುತ್ತಾ ಜನರ ದಾಹವನ್ನು ತಣಿಸುವ ಒರತೆ ತಾನಾಗಬೇಕು. ಅಳುವ ಕಂದನ ನಗಿಸಲು ಅಮ್ಮನ ಕಂಠದ ಜೋಗುಳ ತಾನಾಗಬೇಕೆಂದು ಹಂಬಲಿಸುತ್ತಾರೆ.
ಮಾನವನ ಅಜ್ಞಾನ ತೊಲಗಿಸಲು ವಾಗ್ದೇವಿಯ ಕೈಯಲ್ಲಿಯ ಗ್ರಂಥ ತಾನಾಗಿ ತನ್ನ ಬದುಕು ಸಾರ್ಥಕಪಡಿಸಿ ಕೊಳ್ಳಬೇಕು. ಮುಸ್ಸಂಜೆಯ ಹೊಸ್ತಿಲಲ್ಲಿ ದಿಕ್ಕಿಲ್ಲದ ನರಳಾಡುವ ಧೀನರ, ವೃದ್ಧರ, ಊರುಗೋಲು ತಾನಾಗಬೇಕು. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದರೂ ತಾನು ಬೇರೆಯವರಿಗೆ ಹೊರೆಯಾಗಬಾರದು. ಹಾಗೆ ಹೊರೆಯಾಗುವ ಮೊದಲು ತನ್ನ ಅಂತ್ಯವಾಗಬೇಕು’ ಎಂದು ಕವಯತ್ರಿ ಆಸೆ ಪಡುತ್ತಾರೆ.
ಅಭ್ಯಾಸ
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗಬಯಸಿದ್ದಾರೆ?
ಉತ್ತರ: ‘ಅಜ್ಞಾನ ತೊಲಗಿಸಲು ವಾಗ್ದೇವಿಯ ಕೈಯಲ್ಲಿಯ ಗ್ರಂಥ ತಾನಾಗಬೇಕೆಂದು ಕವಯಿತ್ರಿ ಬಯಸಿದ್ದಾರೆ.
2. ಸದಾ ಚಿಮ್ಮುವ ಚಿಲುಮೆಯಾಗಬೇಕು. ಏಕೆ?
ಉತ್ತರ: ಸದಾ ಚಿಲುಮೆಯಂತೆ ಜನರ ದಾಹವನ್ನು ತಣಿಸುವ ಬತ್ತದ ಒರತೆ ತಾನಾಗಬೇಕೆಂದು ಲೇಖಕಿ ಬಯಸುತ್ತಾರೆ.
3. ನನ್ನಾಸೆ ಕವನದಲ್ಲಿ ಕವಯತ್ರಿಯವರ ಆಸೆಗಳೇನು?
ಉತ್ತರ: ಜೀವನದಲ್ಲಿ ತಾನು ಗೆದ್ದು ಮುಂದೆ ಬರಬೇಕೆಂಬ ಆಸೆಯನ್ನು ಲೇಖಕಿ ಇಲ್ಲಿ ವ್ಯಕ್ತಪಡಿಸಿದ್ದಾಳೆ. ತನಗೆ ತೊಂದರೆಯಾದರೂ, ಆ ತೊಂದರೆಯನ್ನು ಮೆಟ್ಟಿ ನಿಂತು ಬೇರೊಬ್ಬರಿಗೆ ನೆರವು ನೀಡುವ ನಿಸ್ವಾರ್ಥ ವ್ಯಕ್ತಿತ್ವ ತನ್ನದಾಗಬೇಕೆಂದು ಆಸೆಪಡುತ್ತಾಳೆ.
ತನ್ನನ್ನು ತಾನು ಸುಟ್ಟು ಬೆಳಕು ನೀಡುವ ಬತ್ತಿ ತಾನಾಗ ಬೇಕು. ಮಣ್ಣಲ್ಲಿ ಮಣ್ಣಾಗಿ, ಮಣ್ಣ ಮೇಲೊಂದು ಮರವಾಗಿ ಪುಣ್ಯವಂತರಿಗೆ ನೆರಳು ನೀಡುವ ಮರದಂತೆ ತಾನು ನಿಸ್ವಾರ್ಥವಾಗಿ ಬದುಕಬೇಕು.
ಎಂದಿಗೂ ಬತ್ತದ ಒರತೆಯಾಗಬೇಕು.ಸದಾ ಚಿಲುಮೆ ಯಂತೆ ಚಿಮ್ಮುತ್ತಾ ಜನರ ದಾಹವನ್ನು ತಣಿಸುವ ಒರತೆ ತಾನಾಗಬೇಕು. ಅಳುವ ಕಂದನ ನಗಿಸಲು ಅಮ್ಮನ ಕಂಠದ ಜೋಗುಳ ತಾನಾಗಬೇಕೆಂದು ಹಂಬಲಿಸುತ್ತಾಳೆ.
ಮಾನವನ ಅಜ್ಞಾನ ತೊಲಗಿಸಲು ವಾಗ್ದೇವಿಯ ಕೈಯಲ್ಲಿಯ ಗ್ರಂಥ ತಾನಾಗಿ ತನ್ನ ಬದುಕು ಸಾರ್ಥಕಪಡಿಸಿ ಕೊಳ್ಳಬೇಕು. ಮುಸ್ಸಂಜೆಯ ಹೊಸ್ತಿಲಲ್ಲಿ ದಿಕ್ಕಿಲ್ಲದೆ ನರಳಾಡುವ ದೀನರ, ವೃದ್ಧರ, ಊರುಗೋಲು ತಾನಾಗಬೇಕು. ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದರೂ ತಾನು ಬೇರೆಯವರಿಗೆ ಹೊರೆಯಾಗಬಾರದು. ಹಾಗೆ ಹೊರೆಯಾಗುವ ಮೊದಲು ತನ್ನ ಅಂತ್ಯವಾಗಬೇಕು ಎಂದು ಕವಯತ್ರಿ ಆಸೆಪಡುತ್ತಾಳೆ.
ಪೂರಕ ಪಾಠ 4
ಉರಿದ ಬದುಕು
ಲೇಖಕರ ಪರಿಚಯ:
1924ರಲ್ಲಿ ರಾಯಚೂರಿನ ಸಮೀಪದ ಹೆಂಬೇರಾಳಿನಲ್ಲಿ ಶಾಂತರಸರ ಜನನವಾಯಿತು. ಇವರು ಕತೆಗಾರ, ಕವಿ, ಸಂಶೋಧಕ, ನಾಟಕಕಾರ, ಅನುವಾದಕ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು: ಉರಿದ ಬದುಕು. ಸತ್ಯಸ್ನೇಹ, ಬಹುರೂಪ, ನಂಜು ನೊರೆವಾಲು, ಬೆನ್ನ ಹೊಂದಿನ ಬೆಳಕು, ಕಲ್ಯಾಣದೀಪ.
ಪ್ರಶಸ್ತಿ: ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ (2005ರಲ್ಲಿ) ಅಧ್ಯಕ್ಷರಾಗಿದ್ದರು.
ಆಶಯ ಭಾವ:
ಹೈದರಾಬಾದಿನ ರಜಾಕಾರರು ಅಂದಿನ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದ ಹಳ್ಳಿಗಳನ್ನು ಲೂಟಿ ಮಾಡುತ್ತಿದ್ದರು. ಹಳ್ಳಿಯ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದರು. ಮನೆಗಳನ್ನು ಲೂಟಿ ಮಾಡುತ್ತಿದ್ದರು. ಹೈದರಾಬಾದ್-ಕರ್ನಾಟಕ ಪ್ರದೇಶದ ಜನಕ್ಕೆಲ್ಲ ರಜಾಕಾರರ ಮೇಲೆ ಕೋಪ-ದ್ವೇಷ: ಭುಗಿಲೆದ್ದಿತ್ತು. ಹಳ್ಳಿಯವರಿಗೂ ರಜಾಕಾರರಿಗೂ ಹೋರಾಟ ನಡೆಯುತ್ತಲೇ ಇತ್ತು, ಹೈದರಾಬಾದ್ ನಿಜಾಮನ ಕಾಲದಲ್ಲಿ ರಜಾಕಾರರು ಮಾಡಿದ ದೌರ್ಜನ್ಯವನ್ನು ಈ ಕತೆ ಚಿತ್ರಿಸುತ್ತದೆ.
ಪಾಠದ ಸಾರಾಂಶ:
ತಿಪ್ಪಣ್ಣನ ತಂದೆಯನ್ನು ರಜಾಕಾರರು ಕೊಂದು ಹಾಕಿರುತ್ತಾರೆ. ಕೋಪದಿಂದ ತಿಪ್ಪಣ್ಣ ರಜಾಕಾರರೊಂದಿಗೆ ಹೋರಾಡಿ ಅವರಿಂದ ತಪ್ಪಿಸಿಕೊಂಡು ರಾತ್ರಿಯ ಸಮಯದಲ್ಲಿ ತಂಗಿಯ ಮನೆಗೆ ಬರುತ್ತಾನೆ. ಅಣ್ಣನಿಗೆ ಆಶ್ರಯ ಕೊಟ್ಟರೆ ತನ್ನ ಕುಟುಂಬವೂ ರಜಾಕಾರರ ಕೋಪಕ್ಕೆ ಬಲಿಯಾಗುತ್ತದೆಂದು ಹೆದರಿ ತಂಗಿ, ಅನ್ನವ್ವ ಆಣ್ಣನನ್ನು ಮನೆಯೊಳಗೆ ಕರೆಯುವುದಿಲ್ಲ.
ಪೊಲೀಸರು ಗಸ್ತು ತಿರುಗುತ್ತಿದ್ದಾರೆ; ರಜಾಕಾರರು ಗುಂಡು ಹಾರಿಸಲೂಬಹುದು. ಆದ್ದರಿಂದ ಇಲ್ಲಿಂದ ತಪ್ಪಿಸಿಕೊಂಡು ಬೇಗ ಬೇರೆ ಕಡೆ ಹೋಗು, ಈಗಾಗಲೇ ತಂದೆಯನ್ನು ಕಳೆದುಕೊಂಡ ನನಗೆ ಅಣ್ಣನಾದ ನಿನ್ನನ್ನೂ ಕಳೆದುಕೊಳ್ಳುವುದು ಇಷ್ಟವಿಲ್ಲ. ನಮ್ಮ ತಂದೆಯನ್ನು ರಜಾಕಾರರು ಕೊಂದ ಕೋಪ ನನಗೂ ಇದೆ. ಅಪ್ಪನನ್ನು ಕೊಂದವನನ್ನು ಕಡಿದು ಹಾಕು. ಇಲ್ಲಿಂದ ಬೇಗ ಹೋಗು ಎಂದು ದುಃಖದಿಂದ ಹೇಳುತ್ತಾ ಅನ್ನವ್ವ, ಅಣ್ಣನಿಗೆ ತಿನ್ನಲು ಒಂದು ಚೀಲದಲ್ಲಿ ರೊಟ್ಟಿಯನ್ನು ಹಾಕಿ ತಂದು ಕೊಟ್ಟು ಕಳುಹಿಸುತ್ತಾಳೆ.
ತಂಗಿ ಕೊಟ್ಟ ರೊಟ್ಟಿಯ ಚೀಲವನ್ನು ತೆಗೆದುಕೊಂಡು ತಿಪ್ಪಣ್ಣ ಕತ್ತಲಲ್ಲಿ ಮರೆಯಾಗುತ್ತಾನೆ. ಹಿಂದಿನಿಂದ ಶಂಕ್ರಣ್ಣ ಬಂದು ತಿಪ್ಪಣ್ಣನ ಕೈಹಿಡಿದು ದರದರ ನಡೆಸಿಕೊಂಡು ಓಣಿಯಲ್ಲಿದ್ದ ಒಂದು ಮನೆಗೆ ಕರೆದುಕೊಂಡು ಹೋಗುತ್ತಾನೆ. ತಿಪ್ಪಣ್ಣನಿಗೆ ಭಯವಾಗುತ್ತಿರುತ್ತದೆ. ಆ ಮನೆಯಲ್ಲಿದ್ದ ಭೀಮರಡ್ಡಿಯನ್ನು ತಿಪ್ಪಣ್ಣನಿಗೆ ಶಂಕ್ರಣ್ಣ ಪರಿಚಯ ಮಾಡಿಸುತ್ತಾನೆ. ಮನೆತನದ ಮೇಲೆ ಶಂಕ್ರಣ್ಣನಿಗೆ ಕೋಪ ಇದ್ದರೂ ಅವನು ಕೋಪ ತೋರದೆ ತನ್ನ ಕತೆಯನ್ನು ಹೇಳುತ್ತಾನೆ.
ನಾಲ್ಕು ತಿಂಗಳ ಹಿಂದೆ ರಜಾಕಾರರು ನನ್ನ ಮನೆ ಸುಟ್ಟರು. ಕಳೆದ ವರ್ಷ ತಾಯಿಯೂ ಸತ್ತುಹೋದಳು. ಆಗ ಊರಿನ ಬೆಟ್ಟದ ಗೌಡ್ರು ನಿಜಾಮನ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದು, ರಜಾಕಾರರ ಕೈಗೆ, ಸೈನಿಕರ ಕೈಗೆ ಸಿಗದೆ ಅವರ ಶಿಬಿರದ ಮೇಲೆ ಬಾಂಬ್ ಎಸೆಯುತ್ತಿದ್ದರು. ಬೆಟ್ಟದ ಗೌಡ್ರ ಜೊತೇಲಿ ನಾನೂ ಓಡಾಡ್ತಿದ್ದೆ. ಅದನ್ನು ತಿಳಿದು ರಜಾಕಾರರು ನನಗೆ ಒದ್ದು ನನ್ನ ಮನೆಗೆ ಬೆಂಕಿ ಹಚ್ಚಿದರು. ಮೈಯೆಲ್ಲ ಪೆಟ್ಟಾಗಿ ನೋವಿನಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ರಜಾಕಾರರಿಗೆ ಹೆದರಿ ನನಗೆ ಯಾರೂ ಉಪಚಾರ ಮಾಡಲಿಲ್ಲ. ಆಗ ನನಗೆ ಸಹಾಯ ಮಾಡಿದವನು ಮಾದರ
ದುರ್ಗಪ್ಪ. ಆತ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ರೊಟ್ಟಿ-ನೀರು ಕೊಟ್ಟು ಉಪಚಾರ ಮಾಡಿದ. ಆಗ ನನ್ನ ಜೊತೆಗೆ ಇಲ್ಲಿಗೆ ಶಿಬಿರದವರೆಲ್ಲ ಬರುತ್ತಾರೆ. ದುರ್ಗಪ್ಪ ಕೊಟ್ಟಿರುವ ಈ ಕೋಣೆಯೇ ನಮಗೆಲ್ಲರಿಗೆ ಆಶ್ರಯ. ಪಕ್ಕದ ಮತ್ತೊಂದು ಕೋಣೆಯಲ್ಲಿ ದುರ್ಗಪ್ಪನ ಸಂಸಾರ ಇದೆ. ಅವನ ಮಕ್ಕಳು ದುಡಿಯುತ್ತಾರೆ. ದುರ್ಗಪ್ಪ ಭಜನೆ ಮಾಡ್ತಾನೆ. ತತ್ವಪದ ಹಾಡ್ತಾನೆ. ರಾತ್ರಿಯಿಡೀ ಹಾಡುತ್ತಿದ್ದಾನೆ. ಎಷ್ಟೋ ಸಲ ನಮಗೆಲ್ಲ ದುರ್ಗಪ್ಪನೇ ಊಟ ಕೊಡ್ತಾನೆ. ರಜಾಕಾರರು ನಮ್ಮನ್ನು ಹಿಡಿದ್ರೆ ದುರ್ಗಪ್ಪನಿಗೂ ತೊಂದರೆ ಕೊಡ್ತಾರೆ. ಆದ್ರೆ ದುರ್ಗಪ್ಪ ಇದಕ್ಕೆ ಹೆದರಲ್ಲ. ಈ ಸುಡುಗಾಡು ರಾಜ್ಯದಲ್ಲಿ ಇರೋದಕ್ಕಿಂತ ಸಾಯೋದೇ ಒಳ್ಳೇದು. ಆದ್ರೆ ಈ ಹೋರಾಟದಲ್ಲಿ ನಿಜಾಮರಿಗೆ ಸೋಲು, ಗೆಲುವು ನಮಗೆ. ಬದುಕಿದ್ರೆ ಸ್ವತಂತ್ರ ನೋಡೋಣ. ನಾವು ಪುಣ್ಯದ ಕೆಲಸ ಮಾಡಿದ್ರೆ ಮುಂದಿನವರಾದ್ರೂ ಸ್ವತಂತ್ರ ನೋಡ್ತಾರಲ,” ಅಂತಾನೆ. ದುರ್ಗಪ್ಪ ನ ಇಂತಹ ಮಾತುಗಳನ್ನು ಕೇಳಿ ನಮ್ಮ ಕೈಕಾಲು ಉಕ್ಕಿನಂಗಾಗಿವೆ’ ಎಂದು ಒಂದೇ ಉಸಿರಿಗೆ ಶಂಕ್ರಣ್ಣ ತನ್ನ ಬದುಕಿನ ಕತೆಯನ್ನು ತಿಮ್ಮಣ್ಣನಿಗೆ ಹೇಳುತ್ತಾನೆ.
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ಅರ್ಧಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು
ಹೇಳಿದಳು?
ಉತ್ತರ: ‘ಇಲ್ಲಿಗೆ ಬರಬೇಡಣ್ಣ, ನಿನ್ನ ಕಾಲಿಗೆ ಬೀಳತೀನಿ, ಒಳಗೆ ಬರಬೇಡ. ನಮ್ಮನ್ನೆಲ್ಲಾ ಸಾವಿನ ಬಾಯಿಗೆ ತುರುಕಬೇಡ” ಎಂದು ಅನ್ನವ್ವ ತಿಪ್ಪಣ್ಣನಿಗೆ ಹೇಳಿದಳು.
2. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು?
ಉತ್ತರ: ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಶಂಕ್ರಣ್ಣ.
3. ದುರ್ಗಪ್ಪ ಯಾರು?
ಉತ್ತರ: ದುರ್ಗಪ್ಪ ಮಾದರ ಜಾತಿಯವನು, ಭಜನೆ ಮಾಡುವುದು, ಏಕ್ ದಾರಿ ಹಿಡಿದು ತತ್ತ್ವಪದ ಹಾಡುವುದೇ ಅವನ ಕೆಲಸ.
4. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗ್ಗೆ ಹೇಳಿದ ನೀತಿ ಮಾತುಗಳಾವವು?
ಉತ್ತರ: ರಜಾಕಾರರ ಒಡೆತನದಿಂದ ಶಂಕ್ರಣ್ಣ ಸುಸ್ತಾಗಿ ಬೀದಿ ಬದಿಯ ಬೇವಿನ ಗಿಡದ ಕೆಳಗೆ ಬಿದ್ದಿದ್ದ. ಎಚ್ಚರ ತಪ್ಪಿತ್ತು. ಆಗ ದುರ್ಗಪ್ಪನು ಅವನನ್ನು ತನ್ನ ಕೋಣೆಗೆ ಕರೆದುಕೊಂಡು ಬಂದು ತನ್ನ ಕೈಯಾರ ನೀರು ಕುಡಿಸಿದ. ದುರ್ಗಪ್ಪನ ಕೈಯಿಂದ ನೀರು ಕುಡಿಯಲು ಶಂಕ್ರಣ್ಣ ಹಿಂದುಮುಂದು ನೋಡಿದಾಗ ದುರ್ಗಪ್ಪನು, “ಮೊದಲು ಜೀವ ಬದುಕಲಿ ಜೀವಕ್ಕೆ ಯಾವ ಕುಲಾನೂ ಇಲ್ಲ, ಗಾಳಿ, ನೀರು, ನೆಲಕ್ಕೆ ಕುಲ ಇದೆಯೇ? ಅದೆಲ್ಲ ನಾವು ಮಾಡಿಕೊಂಡಿರೋದು, ನೀರು ಕುಡಿ” ಎಂದು ಹೇಳುವನು.
ಶಂಕಣ್ಣನಿಗೆ ತಿನ್ನಲು ರೊಟ್ಟಿ ತಂದು ಕೊಟ್ಟು “ಕುಲ ಮರೆತು, ರೊಟ್ಟಿ ತಿನ್ನು” ಎಂದು ಹೇಳಿ, ಬಸವಣ್ಣನವರ ವಚನವನ್ನು ಹೇಳುತ್ತಾನೆ. ಕಕ್ಕಯ್ಯನ ಮನೆಯಲ್ಲಿ ಬಸವಣ್ಣ ಊಟ ಮಾಡಿದ್ದನ್ನು ಉದಾಹರಿಸುತ್ತಾನೆ. ದುರ್ಗಪ್ಪನ ಮಾತು ಕೇಳಿ ಶಂಕ್ರಣ್ಣನಿಗೆ ಅಚ್ಚರಿಯಾಗುತ್ತದೆ.
5. ದುರ್ಗಪ್ಪನ ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು?
ಉತ್ತರ: “ರಜಾಕಾರರ ಕೈಗೆ ನಾವು ಸಿಕ್ಕಿಬಿದ್ರೆ ನಿಮ್ಗೆ ದುರ್ಗತಿ ಬರತ್ತೆ”- ಎಂದು ಶಂಕ್ರಣ್ಣ ಹೇಳಿದಾಗ ದುರ್ಗಪ್ಪನು “ನಿಮ್ಮ ಹಾಗೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ನಾನಾಗಲಿ, ನನ್ನ ಮಕ್ಕಳಾಗಲೀ ಏನೂ ಮಾಡಿಲ್ಲ. ಈಗ ಇಷ್ಟಾದ್ರು ನಿಮ್ಮಿಂದ ಆಗ್ತದಲ್ಲ. ಈ ಸುಡುಗಾಡ ರಾಜ್ಯದಾಗ ಇರೋದಕ್ಕಿಂತ ಸಾಯೋದು ಒಳ್ಳೆಯದು. ಆದ್ರೆ ಈ ಹೋರಾಟದಲ್ಲಿ ನಿಜಾಮ್ ಮಾತ್ರ ಹೇಳಹೆಸರಿಲ್ಲದಂಗಾಗೋದು ನಿಜ. ಗೆಲುವು ನಮಗೆ. ಬದುಕಿದ್ರೆ ಸ್ವತಂತ್ರ ನೋಡೋಣ. ಸತ್ತರೆ ದೇಶಕ್ಕಾಗಿ ಸತ್ತಿದ್ದಾರೆ ಅಂತಾರೆ. ಅಂತಾ ಸಾವು ಯಾರಿಗುಂಟು ಯಾರಿಗಿಲ್ಲ? ಅದು ಪುಣ್ಯದ ಕೆಲಸ. ನಮ್ಮ ಮುಂದಿನವರಾದ್ರೂ ಸ್ವತಂತ್ರ ನೋಡ್ತಾರಲ್ಲ” ಅಂತ ಹೇಳುತ್ತಿದ್ದ.ಆಗಾಗ ಇಂತಹ ಮಾತನ್ನು ದುರ್ಗಪ್ಪ ಹೇಳಿದ್ದ. ಆ ಮಾತನ್ನು ಕೇಳಿ ‘ನಮ್ಮ ಕೈಕಾಲು ಉಕ್ಕಿನಂಗೆ ಆಗ್ತಾವೆ’ – ಅಂತ ಶಂಕ್ರಣ್ಣ ತಿಪ್ಪಣ್ಣನಿಗೆ ಹೇಳ್ತಾನೆ.
ಪುಟ್ಟ ಹಕ್ಕಿ
ಕವಿ ಪರಿಚಯ:
ಕವಿ ಜಂಬಣ್ಣ ಅಮರಚಿಂತ- ಜನನ 1945, ಬಂಡಾಯ ಕಾವ್ಯ ಸಂದರ್ಭದಲ್ಲಿ ಕೇಳಿಬರುವ ಪ್ರಮುಖ ಹೆಸರು. ಇವರು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಅಂಕುಶದೊಡ್ಡಿಯವರು, ಆರೋಗ್ಯ ಇಲಾಖೆಯಲ್ಲಿ ವೃತ್ತಿನಿರತರಾಗಿದ್ದುಕೊಂಡು ಎಂ.ಎ. ಪದವೀಧರರಾದರು. ಸೇವೆಯಿಂದ ನಿವೃತ್ತಿಗೊಂಡು ಈಗ ರಾಯಚೂರಿನಲ್ಲಿ ನೆಲೆಸಿರುವ ಇವರು ಪ್ರವೃತ್ತಿಯಿಂದ ಪ್ರಗತಿಪರ ಚಿಂತನಶೀಲ ಬರಹಗಾರರು. ಮುಂಜಾವಿನ ಕೊರಳ (1960) ಇವರ ಮೊದಲ ಕವನ ಸಂಕಲನ, ಅಧೋ ಜಗತ್ತಿನ ಆ ಕಾವ್ಯ (1982) ಮಣ್ಣಲ್ಲಿ ಬಿರಿದ ಅಕ್ಷರ, ಹರಿಯುವ ನದಿಗೆ ಮೈಯೆಲ್ಲಾ ಕಾಲು (2003) .ನಂತರ ಪ್ರಕಟವಾದ ಕವನ ಸಂಕಲನಗಳು, ಕುರುವಯ್ಯ ಮತ್ತು ಅಂಕುಶದೊಡ್ಡಿ ಇವರ ಕಾದಂಬರಿ ಕೃತಿ, ನಿಜಾಮ ಕರ್ನಾಟಕದ ಹಳ್ಳಿಗಾಡಿನ ‘ಅಶಿಕ್ಷಿತ ಜನವರ್ಗದ, ಪಾಡುಗಳಿಗೆ ಹೃದಯಪೂರ್ವಕ ಸ್ಪಂದಿಸುವ ಭಾವವಸ್ತು ಮತ್ತು ವಿಶಿಷ್ಟ ಧಾಟಿ, ಧ್ವನಿ ಜಂಬಣ್ಣನವರ ಕೃತಿಗಳಲ್ಲಿ ಕಾಣುತ್ತದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ 2003ರ ಪ್ರಶಸ್ತಿ ಪ್ರಮುಖವಾಗಿದೆ.
ಗಜಲ್
ಕಡ್ಡಿ ಕಡ್ಡಿ ಕೂಡಿಸಿ, ಗೂಡು ಕಟ್ಟುವುದು ಪುಟ್ಟಹಕ್ಕಿ ಬಿರುಗಾಳಿಯ ವಿರುದ್ಧ ಯುದ್ಧ ಸಾರುವುದು ಪುಟ್ಟ ಹಕ್ಕಿ ಸುರಿವ ಸೋನೆ ಮಳೆಗೆ ಅಂಜಿ ಮನೆಯೊಳಗಗಡಗಿದವು. ಗೂಡಿನಿಂದ ಹೊರಬಂದು ಕುಣಿಯುತ ಜಳಕ ಮಾಡುವದು ಪುಟ್ಟಹಕ್ಕಿ
ಕತ್ತಲೆ ಕಳೆದು ಬೆಳಕು ಹರಿದರೂ ನಿದ್ದೆಯಲ್ಲಿ ಮುಳುಗಿರುವವು ಸೂರ್ಯನನು ಸ್ವಾಗತಿಸುತ, ಗೀತೆಹಾಡುವುದು ಪುಟ್ಟಹಕ್ಕಿ ಮೂಡಿದ ರೆಡ್ಡಿಗಳ ಮುರಿಯುತ ಜನರಿರುವರು ಜಗದಲ್ಲಿ ಅವರು ನಯನಾಂಬರದಲ್ಲಿ ಹಾರೆಂದರೆ ಹೇಗೆ ಹಾರುವುದು ಪುಟ್ಟಹಕ್ಕಿ
ನೀವೆಷ್ಟು ತಡೆಗೋಡೆ ಕಟ್ಟಿದರೂ ಜಗದಂಗಳದಲಿ ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು ಪುಟ್ಟಹಕ್ಕಿ ಭೂಮಿಯಲ್ಲಿ ಭುಜಂಗನ ಭಯ, ಆಕಾಶದಲಿ ಗಿಡುಗನ ದಯ ಆವರಿಸಿದ್ದರೂ ಅಳುಕದ ರೆಕ್ಕೆ ಬಿಚ್ಚಿ ಹಾರುವುದು ಪುಟ್ಟಹಕ್ಕಿ
ಸಾರಾಂಶ
ಕಡ್ಡಿ ಕಡ್ಡಿಯನ್ನು ಕೂಡಿಸಿ ಪುಟ್ಟ ಹಕ್ಕಿಯು ಗೂಡನ್ನು ಕಟ್ಟುವುದು. ಬಿರುಗಾಳಿಯ ವಿರುದ್ಧ ಇದು ಯುದ್ಧವನ್ನು
ಸಾರುವುದು.ಧಾರಾಕಾರವಾಗಿ ಸುರಿಯುತ್ತಿರುವಂತಹ ಸೋನೆ ಮಳೆಗೆ ಅಂಜಿ ಮನೆಯೊಳಗೆ ಅಡಗಿದವು. ಪುಟ್ಟ ಹಕ್ಕಿ ಗೂಡಿನಿಂದ ಹೊರಗೆ ಬಂದು ಕುಣಿಯುತ್ತ ಜಗಳ ಮಾಡುವ ಪುಟ್ಟಹಕ್ಕಿ.
ಕತ್ತಲೆಯು ಕಳೆದು ಬೆಳಕು ಹರಿದರೂ ಈ ಪುಟ್ಟ ಹಕ್ಕಿಗಳು ನಿದ್ದೆಯಲ್ಲಿ ಮುಳುಗಿರುವವು. ಸೂರ್ಯನನ್ನು ಸ್ವಾಗತಿಸುತ್ತ ಗೀತೆಯನ್ನು ಹಾಡುವುದು ಪುಟ್ಟಹಕ್ಕಿ, ಮೂಡಿದ ರೆಕ್ಕೆಗಳನ್ನು ಮುರಿಯುವಂತಹ ಪಾಪಿಗಳು ಜಗತ್ತಿನಲ್ಲಿ ಇರುವರು. ಅವರ ನಯನವೆಂಬ ಅಂಬರದಲ್ಲಿ ಹಾರು ಎಂದರೆ ಹೇಗೆ ಹಾರುವುದು ಪುಟ್ಟ ಹಕ್ಕಿ.
ನೀವು ಎಷ್ಟು ತಡೆಗೋಡೆಯನ್ನು ಕಟ್ಟಿದರೂ ಜಗದ ಅಂಗಳದಲ್ಲಿ ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರಾಡುವುದು ಪುಟ್ಟಹಕ್ಕಿ. ಭೂಮಿಯಲ್ಲಿ ಹಾವಿನ ಭಯ, ಆಕಾಶದಲ್ಲಿ ಗಿಡುಗನ ಭಯ ಆವರಿಸಿದ್ದರೂ ಅಳುಕದೆ ರೆಕ್ಕೆ ಬಿಚ್ಚಿ ಹಾರಾಡುವದು ಪುಟ್ಟಹಕ್ಕಿ.
ಅಭ್ಯಾಸ
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ?
ಉತ್ತರ: ಪುಟ್ಟ ಹಕ್ಕಿಯು ಕಡ್ಡಿ ಕಡ್ಡಿ ಕೂಡಿಸಿ ಗೂಡನ್ನು ಕಟ್ಟುತ್ತದೆ.
2. ಗೀತೆಯನ್ನು ಹಾಡುತ್ತ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ?
ಉತ್ತರ: ಗೀತೆಯನ್ನು ಹಾಡುತ್ತ, ಪುಟ್ಟಹಕ್ಕಿಯು ಸೂರ್ಯನನ್ನು ಸ್ವಾಗತಿಸುತ್ತದೆ.
3. ಜಗದಲ್ಲಿ ಎಂತಹ ಜನರಿರುವರು?
ಉತ್ತರ: ಜಗದಲ್ಲಿ ಮೂಡಿದ ರೆಕ್ಕೆಗಳ ಮುರಿವ ಜನರಿರುವರು.
4. ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ ?
ಉತ್ತರ: ಪುಟ್ಟಹಕ್ಕಿಯು ಜಗದಂಗಳದಲ್ಲಿ ಆ ಮೂಲೆಯಿಂದ ಈ ಮೂಲೆಗೆ, ಈ ಮೂಲೆಯಿಂದ ಆ ಮೂಲೆಗೆ ಸದಾ ಹಾರಾಡುವುದು.
5. ಭೂಮಿ ಆಕಾಶದಲ್ಲಿ ಪುಟ್ಟ ಹಕ್ಕಿಗೆ ಯಾರ ಭಯವಿದೆ?
ಉತ್ತರ: ಪುಟ್ಟ ಹಕ್ಕಿಗೆ ಭೂಮಿಯಲ್ಲಿ ಹಾವಿನ, ಆಕಾಶದಲ್ಲಿ ಗಿಡುಗನ ಭಯವಿದೆ.