ಭಾರತದ ವಿದೇಶಾಂಗ ನೀತಿ ಮತ್ತು ಜಾಗತಿಕ ಸವಾಲುಗಳು
10ನೇ ತರಗತಿ ಸಮಾಜ ವಿಜ್ಞಾನ ರಾಜ್ಯಶಾಸ್ತ್ರ ಅಧ್ಯಾಯ 21 ನೋಟ್ಸ್ ಅಥವಾ ಪ್ರಶ್ನೋತ್ತರಗಳು
I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.
೧. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಜವಾಹರಲಾಲ್ ನೆಹರು .
೨. ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.
೩. ಭಾರತವು ಒಂದು ಶಾಂತಿಪ್ರಿಯ ರಾಷ್ಟ್ರವಾದುದರಿಂದ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಪ್ರತಿಪಾದಿಸುತ್ತಿದೆ.
II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ :
೪. ವಿದೇಶಾಂಗ ನೀತಿ ಎಂದರೇನು ?
ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.
೫. ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಯಾವುವು?
ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಈ ಕೆಳಗಿನಂತಿವೆ.
ವಸಹಾತುಶಾಹಿತ್ವಕ್ಕೆ ವಿರೋಧ
ಸಾಮ್ರಾಜ್ಯಶಾಹಿತ್ವಕ್ಕೆ ವಿರೋಧ
ವರ್ಣಭೇದ ನೀತಿಗೆ ವಿರೋಧ
ಅಲಿಪ್ತ ನೀತಿ
ಆಫ್ರಿಕಾ ಮತ್ತು ಏಷ್ಯಾದ ಪ್ರಗತಿಗೆ ಪ್ರಥಮ ಆದ್ಯತೆ
ನಿಶಸ್ತ್ರೀಕರಣಕ್ಕೆ ಬೆಂಬಲ
ವಿಶ್ವಸಂಸ್ಥೆ ಮತ್ತು ವಿಶ್ವಶಾಂತಿಗೆ ಬೆಂಬಲ
೬. ದ್ವಿತೀಯ ಮಹಾಯುದ್ಧದ ನಂತರ ಎದುರಾದ ಜಾಗತಿಕ ಸವಾಲುಗಳು ಯಾವುವು?
ಮಾನವ ಹಕ್ಕುಗಳ ನಿರಾಕರಣೆ, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇದ ನೀತಿ
ಹಾಗೂ ಭಯೋತ್ಪಾದಕತೆಯಂತಹ ಹಲವಾರು ಸವಾಲುಗಳು ದ್ವಿತೀಯ ಮಹಾಯುದ್ಧದ ನಂತರ ಎದುರಾಗಿವೆ.
೭. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತವು ಕೈಗೊಂಡಿರುವ ಕ್ರಮಗಳನ್ನು ತಿಳಿಸಿ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತವಾಗಿರಬೇಕೆಂಬುದನ್ನು ಭಾರತ ಸಮರ್ಥಿಸುತ್ತಾ ಬಂದಿದೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.ಜನಾಂಗ ಹತ್ಯೆ, ಎಲ್ಲಾ ವಿಧದ ಶೋಷಣೆ ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ. ವಿಶ್ವಸಂಸ್ಥೆ ಹಾಗೂ ಇನ್ನಿತರ ಜಾಗತಿಕ ವೇದಿಕೆಗಳ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಿದೆ.
೮. ‘ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ’ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ಪರಿಣಾಮಗಳಾವುವು?
ವಿಶ್ವದಾದ್ಯಂತ ಭಯ ಅಸ್ಥಿರತೆ ಸೃಷ್ಟಿಯಾಗುತ್ತದೆ. ಯುದ್ಧದ ಸಂಭವನೀಯತೆ ಹೆಚ್ಚಾಗುತ್ತದೆ. ವಿಶ್ವಶಾಂತಿ ಸ್ಥಾಪನೆಗೆ ಅಡ್ಡಿಯಾಗುತ್ತದೆ. ಆರ್ಥಿಕವಾಗಿ ನಷ್ಟದಾಯಕ ಸ್ಥಿತಿ ಹಾಗೂ ಆರ್ಥಿಕ ಅಸ್ಥಿರತೆಗೆ ದಾರಿ ಮಾಡಿಕೊಡುತ್ತದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಐಸನ್ ಹೋವರ್ ಒಮ್ಮೆ ಹೀಗೆ ಉದ್ಗರಿಸಿದ್ದರು. ‘ಶಸ್ತ್ರಗಳನ್ನು ಹೊಂದಿದ ಈ
ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’. ಈ ಹೇಳಿಕೆಯು ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ದುಷ್ಪರಿಣಾಮಗಳನ್ನು ದೃಢಪಡಿಸುತ್ತದೆ.
೯. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವುವು? ಈ ರೀತಿ ಹಿಂದುಳಿಯುವಿಕೆಗೆ ಕಾರಣಗಳಾವುವು?
ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳು
ಬಡತನ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಸಮರ್ಪಕವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಕಳಪೆಯಾಗಿರುತ್ತದೆ. ಅನಾರೋಗ್ಯ ಹಾಗೂ ಅಪೌಷ್ಟಿಕತೆಹೆಚ್ಚಾಗಿರುತ್ತದೆ. ತಂತ್ರಜ್ಞಾನದ ಕೊರತೆ ಹೆಚ್ಚಾಗಿರುತ್ತದೆ, ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತದೆ.
ಈ ರೀತಿ ಹಿಂದುಳಿಯುವಿಕೆಗೆ ಕಾರಣಗಳು
ಐರೋಪ್ಯ ರಾಷ್ಟ್ರಗಳು ಆಫ್ರಿಕ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದವು. ಈ ಸಾಮ್ರಾಜ್ಯ ಶಾಹಿತ್ವ ಮತ್ತು ವಸಾಹತು ಶಾಹಿತ್ವದಿಂದಾಗಿ ಏಷ್ಯಾ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳ ಸಂಪನ್ಮೂಲಗಳನ್ನು ಲೂಟಿ ಮಾಡಲಾಯಿತು. ಇದರಿಂದಾಗಿ ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳು ಆರ್ಥಿಕವಾಗಿ ತೀರಾ ಹಿಂದುಳಿದವು.
೧೦. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತದ ಪ್ರಯತ್ನಗಳನ್ನು ತಿಳಿಸಿ.
ಭಾರತವು ಅಲಿಪ್ತ ನೀತಿಯನ್ನು ಜಗತ್ತಿನಲ್ಲಿ ಮುಂದುವರಿಸಿದೆ.ಯಾವುದೇಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಭಾರತ ಪ್ರತಿಪಾದಿಸಿದೆ. ಹಲವು ಬಡ ರಾಷ್ಟ್ರಗಳಿಗೆ ಭಾರತವು ನೆರವು ನೀಡುತ್ತಾ ಬಂದಿದೆ. ತನ್ಮೂಲಕ ಹಿಂದುಳಿದ ರಾಷ್ಟ್ರಗಳ ಆತ್ಮಗೌರವವನ್ನು ಭಾರತ ಎತ್ತಿ ಹಿಡಿಯಲು ಸಹಕರಿಸಿದೆ. ಅದರೊಂದಿಗೆ ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಕೂಡ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿದೆ.
೧೧. ಭಯೋತ್ಪಾದಕತೆಯಿಂದ ಉಂಟಾಗುವ ಪರಿಣಾಮಗಳಾವುವು?
ಭಯೋತ್ಪಾದಕತೆಯು ವ್ಯಕ್ತಿಗಳ ಪ್ರಾಣಹಾನಿಯನ್ನುಂಟು ಮಾಡುತ್ತದೆ, ಆಸ್ತಿ-ಪಾಸ್ತಿಗಳ ನಷ್ಟ ಉಂಟುಮಾಡುತ್ತದೆ, ಆರ್ಥಿಕ ಅಭಿವೃದ್ಧಿಗೆ ತಡೆ ಉಂಟುಮಾಡುತ್ತದೆ, ಸಾಮಾಜಿಕ ಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತದೆ, ಮಾನಸಿಕ ವೇದನೆಯನ್ನು ನೀಡುತ್ತದೆ, ಕಾನೂನು – ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುತ್ತದೆ. ವಿವಿಧ ರಾಷ್ಟ್ರಗಳ ಜಾಗತಿಕ ಭದ್ರತೆಗೆ ಆತಂಕಕಾರಿಯಾಗಿದೆ.
೧೨. ಭಯೋತ್ಪಾದನೆಯ ಸವಾಲನ್ನು ಎದುರಿಸಲು ಭಾರತವು ಕೈಗೊಂಡಿರುವ ಕ್ರಮಗಳಾವುವು?
ರಾಷ್ಟ್ರೀಯ ತನಿಖಾ ದಳವನ್ನು (NIA) ಸ್ಥಾಪಿಸಿದೆ. ವಿಶೇಷ ಪರಿಣತಿ ಪಡೆಗಳನ್ನು ರಚಿಸಿದೆ ಕೆಲವೊಮ್ಮೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ರಕ್ಷಣಾ ಪಡೆಗಳನ್ನು ಬಳಸುತ್ತಿದೆ, ತನ್ನ ಹಾಗೂ ಅನ್ಯರ ನೆಲದಲ್ಲಿ ಭಯೋತ್ಪಾದಕತೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ, ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಹಕಾರದ ಬಗ್ಗೆ ನಿರಂತರವಾಗಿ ಕರೆ ನೀಡುತ್ತಾ ಬಂದಿದೆ, ರಾಜ್ಯ ಸರ್ಕಾರಗಳು ಭಯೋತ್ಪಾದಕ ನಿಗ್ರಹ ಪಡೆಗಳನ್ನು (ATS) ರಚಿಸಿದೆ, ಇಂಟೆಲಿಜೆನ್ಸ್ ಬ್ಯೂರೋ (IB) ಮತ್ತು ಸಂಶೋಧನೆ ಹಾಗೂ ವಿಶ್ಲೇಷಣಾ ಘಟಕ (RAW) ಮುಂತಾದ ಗುಪ್ತಚರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಗುಪ್ತಚರ ವ್ಯವಸ್ಥೆಯನ್ನು ಬಲವರ್ಧನೆ ಮಾಡಲಾಗಿದೆ, ಭಯೋತ್ಪಾದಕರಿಗೆ ಹಣಕಾಸು ವರ್ಗಾವಣೆಯನ್ನು ತಡೆಯಲು ಹಣಕಾಸು ಗುಪ್ತಚರ ಘಟಕವನ್ನು ಸ್ಥಾಪಿಸಲಾಗಿದೆ. ಎಲ್ಲಾ ರೀತಿಯ ಭಯೋತ್ಪಾದಕತೆಯ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತ ಬೆಂಬಲವನ್ನು ಸೂಚಿಸುತ್ತದೆ.
III. ಚಟುವಟಿಕೆಗಳು
೧. ಮಾನವ ಹಕ್ಕುಗಳನ್ನು ರಕ್ಷಿಸಲು ರಚಿಸಲಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗ್ಗೆ ಮಾಹಿತಿ ಸಂಗ್ರಹಿಸಿ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಭಾರತದ ನಾಗರಿಕರಿಗೆ ಮಾನವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಸ್ಥಾಪಿಸಲಾದ ಕಾನೂನು ಸಂಸ್ಥೆಯಾಗಿದೆ. ಮಾನವ ಹಕ್ಕುಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳು ಸೇರಿವೆ.
ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಶಾಸಕಾಂಗ ಕಾನೂನಿನಡಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಅಕ್ಟೋಬರ್ 12, 1993 ರಂದು ಸ್ಥಾಪಿಸಲಾಯಿತು.
ಮಾರ್ಚ್ 3, 2022 ರಿಂದ, ಶ್ರೀ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾಗಿದ್ದಾರೆ.
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಗಳು
ಅವು ಈ ಕೆಳಗಿನಂತಿವೆ:
ಮಾನವ ಹಕ್ಕುಗಳ ರಕ್ಷಣೆ.
ಮಾನವ ಹಕ್ಕುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಧಾನಗಳನ್ನು ಅಭಿವೃದ್ಧಿಪಡಿಸುವುದು.
ಭಾರತ ಸರ್ಕಾರ ಅಥವಾ ಸಾರ್ವಜನಿಕ ಸೇವಕರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರಣೆ.
ಭಾರತದ ನಾಗರಿಕರಿಗೆ ಮಾನವ ಹಕ್ಕುಗಳು ಮತ್ತು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪಾತ್ರದ ಬಗ್ಗೆ ಶಿಕ್ಷಣ ನೀಡುವುದು.
ಮಾನವ ಹಕ್ಕುಗಳಿಗೆ ಅಡ್ಡಿಯಾಗುವ ಅಂಶಗಳನ್ನು ವಿಶ್ಲೇಷಿಸುವುದು ಮತ್ತು ಅವುಗಳಿಗೆ ಪರಿಹಾರ ಕ್ರಮಗಳನ್ನು ಅಭಿವೃದ್ಧಿಪಡಿಸುವುದು.
ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿ ಮಾನವ ಹಕ್ಕುಗಳಲ್ಲಿ ಸಂಶೋಧನೆ ಕೈಗೊಳ್ಳುವುದು ಮತ್ತು ಉತ್ತೇಜಿಸುವುದು.
ದೇಶದ ಜೈಲುಗಳಿಗೆ ಭೇಟಿ ನೀಡಿ ಕೈದಿಗಳ ಸ್ಥಿತಿಯನ್ನು ಪರಿಶೀಲಿಸುವುದು.
ಮಾನವ ಹಕ್ಕುಗಳಿಗೆ ಕೊಡುಗೆ ನೀಡುವ ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಒಬ್ಬ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಮತ್ತು ಇತರ ಐದು ಸದಸ್ಯರನ್ನು ಒಳಗೊಂಡಿದೆ. ಅವರು ಈ ಕೆಳಗಿನಂತಿದ್ದಾರೆ:
ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು: ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾಗಲು ಅಗತ್ಯವಿರುವ ಅವಶ್ಯಕತೆಯೆಂದರೆ, ಆ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು.
ಒಬ್ಬ ಸದಸ್ಯರು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ಅಥವಾ ಪ್ರಸ್ತುತ ನ್ಯಾಯಾಧೀಶರಾಗಿರುತ್ತಾರೆ.
ಒಬ್ಬ ಸದಸ್ಯರು ಹೈಕೋರ್ಟ್‌ನ ಮಾಜಿ ಅಥವಾ ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿರುತ್ತಾರೆ.
ಮಾನವ ಹಕ್ಕುಗಳ ವಿಷಯಗಳಲ್ಲಿ ಜ್ಞಾನ, ಪ್ರಾಯೋಗಿಕ ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಇನ್ನೂ ಮೂವರು ಸದಸ್ಯರು. ಈ ಮೂವರು ಸದಸ್ಯರಲ್ಲಿ ಒಬ್ಬರು ಮಹಿಳೆಯಾಗಿರಬೇಕು.
೨. ಕೈಲಾಶ್ ಸತ್ಯಾರ್ಥಿರವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ಸಂಗ್ರಹಿಸಿ.
ದೂರದೃಷ್ಟಿಯ ಜಾಗತಿಕ ಚಿಂತಕ ಮತ್ತು ಸಾಮಾಜಿಕ ಸುಧಾರಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಕರುಣೆಯ ಜಾಗತೀಕರಣದ ಮುಂಚೂಣಿಯಲ್ಲಿದ್ದಾರೆ. ಸತ್ಯಾರ್ಥಿಯವರ ಜೀವನ ಮತ್ತು ಧ್ಯೇಯವು ಕರುಣೆಯ ಆಳವಾದ ಪ್ರಭಾವವನ್ನು ಸಾಕಾರಗೊಳಿಸುತ್ತಿದ್ದು, ಅರ್ಥಪೂರ್ಣ ಬದಲಾವಣೆಯನ್ನು ತರುವ ಅದರ ಪರಿವರ್ತಕ ಶಕ್ತಿಯನ್ನು ವಿವರಿಸುತ್ತದೆ. ಕರುಣೆಯು ದುರ್ಬಲ ಭಾವನೆಯಲ್ಲ ಆದರೆ ಅದು ತನ್ನ ಸ್ವಂತದ್ದೆಂಬಂತೆ ಇತರರ ನೋವನ್ನು ನಿವಾರಿಸಲು ಕರುಣಾಭರಿತ ಕ್ರಮ ತೆಗೆದುಕೊಳ್ಳಲು ಅಂತ್ಯವಿಲ್ಲದ ಶಕ್ತಿ ಮತ್ತು ಚಾಲನೆಯನ್ನು ಒದಗಿಸುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ. ಅವರ ಇತ್ತೀಚಿನ ಆಂದೋಲನವಾದ ಸತ್ಯಾರ್ಥಿ ಜಾಗತಿಕ ಕರುಣೆಯ ಮೂಲಕ, ಕರುಣೆಯನ್ನು ಮಾರ್ಗದರ್ಶಿ ಶಕ್ತಿಯಾಗಿ ಬಳಸಿಕೊಂಡು ನ್ಯಾಯಯುತ, ಶಾಂತಿಯುತ ಮತ್ತು ಸುಸ್ಥಿರ ಜಗತ್ತನ್ನು ಉತ್ತೇಜಿಸಲು ಕರುಣೆಯನ್ನು ಜಾಗತೀಕರಣಗೊಳಿಸುವ ಗುರಿಯನ್ನು ಸತ್ಯಾರ್ಥಿ ಹೊಂದಿದ್ದಾರೆ. ‘ಮಕ್ಕಳು ಮತ್ತು ಯುವಜನರ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲಾ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ನಡೆಸಿದ ಹೋರಾಟಕ್ಕಾಗಿ’ ಅವರಿಗೆ 2014 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ದುರ್ಬಲರ ವಿರುದ್ಧದ ಹಿಂಸಾಚಾರವನ್ನು ತೊಡೆದುಹಾಕಲು ಸತ್ಯಾರ್ಥಿಯವರ ನಿರ್ಭೀತ ಮತ್ತು ಅವಿರತ ಪ್ರಯತ್ನಗಳು ಹಲವಾರು ಸಾಮೂಹಿಕ ಚಳುವಳಿಗಳನ್ನು ಹುಟ್ಟುಹಾಕಿವೆ ಮತ್ತು ವಿಶ್ವಾದ್ಯಂತ ಕ್ರಾಂತಿಕಾರಿ ಶಾಸನಗಳ ರಚನೆಗೆ ಕಾರಣವಾಗಿವೆ.
IV. ಯೋಜನೆ
೧. ಮಾನವ ಹಕ್ಕುಗಳ ನಿರಾಕರಣೆಯ ವಿರುದ್ಧ ಹೋರಾಡಿದ ಮಹನೀಯರುಗಳ ಜೀವನಚರಿತ್ರೆಯನ್ನು ಓದಿರಿ.