9th standard kannada poem,
kannada Nadu nudi question answer
9ನೇ ತರಗತಿ ಕನ್ನಡ ಪ್ರಶ್ನೆ ಉತ್ತರಗಳು
ಪದ್ಯ ಭಾಗ 16
ಕನ್ನಡ ನಾಡು ನುಡಿ
ಕವಿ ಪರಿಚಯ :
ಶ್ರೀವಿಜಯ: 9ನೇ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಆಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದನು. ಈತ ಬರೆದ ‘ಕವಿರಾಜಮಾರ್ಗ’ ಅಲಂಕಾರ ಗ್ರಂಥ. ಇದು ಕನ್ನಡ ಭಾಷೆಯಲ್ಲಿ ಲಭಿಸಿರುವ ಮೊಟ್ಟಮೊದಲ ಕೃತಿ.
ನಯಸೇನ: ಈತನ ಕಾಲ ಸು. 12ನೇ ಶತಮಾನ. ಗದಗ ಜಿಲ್ಲೆ ಮುಳಗುಂದದಲ್ಲಿದ್ದನು. ಈತನ ಚಂಪೂಕಾವ್ಯ ಧರ್ಮಾಮೃತ.
ನೇಮಿಚಂದ್ರ: ಸುಮಾರು ಕ್ರಿ.ಶ. 12ನೇ ಶತಮಾನ ದಲ್ಲಿದ್ದನು. ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿಪುರಾಣ ಈತನ ಪ್ರಸಿದ್ಧ ಕಾವ್ಯ.
ಮಹಾಲಿಂಗರಂಗ: ಕ್ರಿ.ಶ. ಸುಮಾರು 17ನೇ ಶತಮಾನ ದಲ್ಲಿದ್ದನು. ಇವನ ನಿಜವಾದ ಹೆಸರು ಶ್ರೀರಂಗ. ಇವನ ಆರಾಧ್ಯದೈವ ಮಲ್ಲಿಕಾರ್ಜುನ. ಇವನ ಕೃತಿ ಅನುಭವಾಮೃತ. ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ವಿಶೇಷ.
ಆಂಡಯ್ಯ: ಕ್ರಿ.ಶ. ಸುಮಾರು 13ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿದ್ದನು. ಇವನ ಕೃತಿ ‘ಕಬ್ಬಿಗರ ಕಾವ’ ಚಂಪೂ ಕೃತಿ.
ಆಶಯ ಭಾವ:
ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಕನ್ನಡ ನಾಡಿನ ವಿಶಿಷ್ಟತೆಯನ್ನು, ಕನ್ನಡ ಭಾಷೆಯನ್ನು ಹೊಗಳಿರುವ ಕವಿಗಳ ಪದ್ಯಗಳು ಇಲ್ಲಿವೆ. ಈ ಪದ್ಯಗಳನ್ನು ಓದುತ್ತಿದ್ದರೆ ಕನ್ನಡಿಗನ ಮನ ಪುಳಕಿತಗೊಳ್ಳು ವುದರಲ್ಲಿ ಸಂಶಯವೇ ಇಲ್ಲ.
ಪದ್ಯ ಹಾಗೂ ಅದರ ಸಾರಾಂಶ:
ಕಂ।
ಪದನರಿದು ನುಡಿಯಲುಂ ನುಡಿ ದುದನರಿದಾರಯಲುಮಾರ್ಪರಾ ನಾಡವರ್ಗಳ್ | ಚದುರರ್ ನಿಜದಿಂ ಕುರಿತೋ
ದದೆಯಂ ಕಾವ್ಯಪ್ರಯೋಗ ಪರಿಣಿತಮತಿಗಳ್||
– ಶ್ರೀವಿಜಯ
ಸಾರಾಂಶ: ಕನ್ನಡಿಗರ ಮಾತಿನ ವೈಖರಿ, ಕನ್ನಡಿಗರ ಕಾವ್ಯ ಪರಿಣತಿಯನ್ನು ಕವಿ ಇಲ್ಲಿ ಹೆಮ್ಮೆಯಿಂದ ಹೇಳುತ್ತಾನೆ. ಪದಗಳ ಅರ್ಥಗಳನ್ನು ಸರಿಯಾಗಿ ತಿಳಿದುಕೊಂಡು, ಸಂದರ್ಭಕ್ಕೆ ಸರಿಯಾಗಿ ಮಾತನಾಡುವ ಕಲೆ ಕನ್ನಡಿಗರಿಗೆ ತಿಳಿದಿತ್ತು. ಬೇರೆಯವರು ಹೇಳಿದ್ದನ್ನು ಸರಿಯಾಗಿ ಅರಿತುಕೊಳ್ಳುವ ಸಾಮರ್ಥ್ಯವೂ ಅವರಿಗಿತ್ತು. ಸಾಕ್ಷರರಲ್ಲದವರೂ ಕಾವ್ಯಪ್ರಯೋಗ ಮಾಡುವುದರಲ್ಲಿ ಅಂದರೆ ಕಾವ್ಯ ರಚಿಸುವುದರಲ್ಲಿ ಪರಿಣಿತರಾಗಿದ್ದ ಕನ್ನಡಿಗರು ತುಂಬಾ ಚತುರರಾಗಿದ್ದರು ಎಂದು ಕವಿ ಶ್ರೀವಿಜಯ ಹೇಳುತ್ತಾನೆ.
ಕಂ||
ಸಕ್ಕದಂ ಪೇಳ್ವೊಡೆ ನೆರೆ ಸಕ್ಕದಮಂ ಪೇಳ್ಗೆ ಶುದ್ಧ ಕನ್ನಡದೊಳ್ ತಂ|
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ ।।
– ನಯಸೇನ
ಸಾರಾಂಶ: ಕನ್ನಡ ಭಾಷಾ ಪ್ರಯೋಗದ ಬಗ್ಗೆ ಕವಿ ಇಲ್ಲಿ ಹೇಳುತ್ತಾನೆ. ಸಂಸ್ಕೃತದಲ್ಲಿ ಹೇಳುವುದಾದರೆ ಶುದ್ಧ ಸಂಸ್ಕೃತದಲ್ಲಿಯೇ ಮಾತನಾಡಿ.ಆದರೆ ಶುದ್ಧ ಕನ್ನಡ ಭಾಷೆಯಲ್ಲಿ ಸಂಸ್ಕೃತವನ್ನು ಬೆರಸುವುದು ಸಲ್ಲದೆಂದು ಕವಿಯ ಅಭಿಪ್ರಾಯ. ಕನ್ನಡದಲ್ಲಿ ಸಂಸ್ಕೃತವನ್ನು ಬೆರೆಸಿದರೆ ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದಂತಾಗುವುದು ಎಂದು ನಯಸೇನನ ಅಭಿಪ್ರಾಯ. ಆದ್ದರಿಂದ ಶುದ್ಧ ಕನ್ನಡದಲ್ಲಿ ಮಾತನಾಡಬೇಕೆಂದು ಹೇಳುತ್ತಾನೆ.
ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ। ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ।
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ||
– ನೇಮಿಚಂದ್ರ
.
ಸಾರಾಂಶ: ಚಂಚಲತೆಗೆ ಹೆಸರಾದ ಕಪಿಗಳು ಲಂಕೆಗೆ ಸೇತುವೆ ಕಟ್ಟಿದವು ಎಂದು ರಾಮಾಯಣದಲ್ಲಿ ಕವಿ ಹೇಳುತ್ತಾನೆ. ವಾಮನ ರೂಪಿಯಾದ ಬಾಲಕ ತನ್ನ ಒಂದು ಪಾದದಿಂದ ಮುಗಿಲನ್ನು ಮುಟ್ಟಿದನೆಂದೂ, ತ್ರಿವಿಕ್ರಮರೂಪಿಯಾದನೆಂದು ಕವಿ ಹೇಳುತ್ತಾನೆ. ಕಿರಾತನಾಗಿ ಬಂದ ಹರನೊಡನೆ ಯುದ್ಧ ಮಾಡುವಾಗ ಅರ್ಜುನನು ಹರನ ಗಂಟಲನ್ನು ತನ್ನ ಪಾದದಿಂದ ಒತ್ತಿದನೆಂದು ಕವಿ ವರ್ಣಿಸುತ್ತಾನೆ. ಕಪಿಗಳು ಸೇತುವೆ ಕಟ್ಟಿದ್ದು ನಿಜವೋ, ಸುಳ್ಳೋ ತಿಳಿಯದು; ವಾಮನ ತನ್ನ ಪಾದದಿಂದ ಮುಗಿಲನ್ನು ಮುಟ್ಟಿದ್ದು ಸತ್ಯವೋ ಅಸತ್ಯವೋ ತಿಳಿಯದು. ನರನು (ಅರ್ಜುನ) ಹರನ ಗಂಟಲನ್ನು ಒತ್ತಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಕವಿಗಳು ಬ್ರಹ್ಮನ ಸೃಷ್ಟಿಯಂತೆ ಕಾವ್ಯ ಸೃಷ್ಟಿಯನ್ನು ಮಾಡುತ್ತಾರೆ. ಈ ಘಟನೆ ಸತ್ಯವಿರಬಹುದೆ ಎಂಬ ಸಂಶಯ ಓದುಗರಿಗೆ ಬಾರದಂತೆ ಅತಿ ಶ್ರೇಷ್ಠವಾದ ಕಾವ್ಯವನ್ನು ರಚಿಸುವ ಕವಿಗಳ ಸಾಮರ್ಥ್ಯವನ್ನು ನೇಮಿಚಂದ್ರ ಇಲ್ಲಿ ಪ್ರಶಂಸೆ ಮಾಡುತ್ತಿದ್ದಾನೆ.
ಭಾ.ಷ.
ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು?
– ಮಹಲಿಂಗರಂಗ
ಸಾರಾಂಶ: ಕನ್ನಡ ಭಾಷೆಯ ಸೌಂದರ್ಯದ ಬಗ್ಗೆ ಕವಿ ಇಲ್ಲಿ ಹೇಳುತ್ತಾನೆ. ಸುಲಿದ ಬಾಳೆಯ ಹಣ್ಣು ತಿನ್ನಲು ಎಷ್ಟು ಸುಲಭವೋ ಸಿಗುರು ತೆಗೆದ ಕಬ್ಬು ತಿನ್ನಲು ಎಷ್ಟು ಸುಲಭವೋ, ಹದವಾದ ಬಿಸಿಯಿರುವ ಹಾಲು ಕುಡಿಯಲು ಎಷ್ಟು ಹಿತವಾಗಿರುತ್ತದೋ ಹಾಗೆ ಕನ್ನಡ ಭಾಷೆ ಸುಲಭ, ಸುಂದರ, ಸರಳ, ಸುಂದರವಾದ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಮೋಕ್ಷ ಗಳಿಸಿಕೊಂಡಂತಾಗುವುದು. ಹೀಗಿರುವಾಗ ಸಂಸ್ಕೃತ ಭಾಷೆಯ ಅಗತ್ಯ ನಮಗಿದೆಯೇ? ಶುದ್ಧ ಕನ್ನಡ ಭಾಷೆ ಸಾಲದೆ? ಎಂದು ಹೇಳುತ್ತಾನೆ.
ಮಲ್ಲಿಗೆಯಲ್ಲದೆ ಸಂಪಗೆ l
ಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ॥
ಗಲ್ಲದೆ ಮಾವಲ್ಲದೆ ಕೌಂ ।
ಗಲ್ಲದೆ ಗಿಡಮರಗಳೆಂಬುವಿಲ್ಲಾ ನಾಡೊಳ್ ॥
– ಆಂಡಯ್ಯ
ಸಾರಾಂಶ: ಕನ್ನಡ ನಾಡಿನ ಸುಂದರ ಪ್ರಕೃತಿಯನ್ನು ಕವಿ ವರ್ಣಿಸಿದ್ದಾನೆ. ಮಲ್ಲಿಗೆಯ ಬಳ್ಳಿ, ಸಂಪಿಗೆ ಹೂವಿನ ಗಿಡ, ದಾಳಿಂಬೆ ಹಣ್ಣಿನ ಮರ, ತೆಂಗಿನ ಮರ, ಮಾವಿನರ, ಅಡಿಕೆಯ ಮರ ಹಲವಾರು ರೀತಿಯ ಗಿಡಮರಬಳ್ಳಿಗಳು ಕನ್ನಡ ನಾಡಿನಲ್ಲಿ ಇವೆ ಎಂದು ಪ್ರಕೃತಿ ಸೌಂದರ್ಯವನ್ನು ಸಂಭ್ರಮದಿಂದ ವರ್ಣಿಸಿದ್ದಾನೆ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ?
ಉತ್ತರ: ಕನ್ನಡಿಗರು ಪದನರಿದು ನುಡಿಯುವವರು ಎಂದು ಕವಿ ಹೇಳಿದ್ದಾನೆ.
2, ತುಪ್ಪದೊಡನೆ ಯಾವುದನ್ನು ಬೆರೆಸಬಾರದು?
ಉತ್ತರ: ತುಪ್ಪದೊಡನೆ ತೈಲವನ್ನು ಬೆರೆಸಬಾರದು.
3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು?
ಉತ್ತರ: ಸುಲಿದ ಬಾಳೆಯ ಹಣ್ಣಿನಂತಿರುವ ಭಾಷೆ ಕನ್ನಡ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಕನ್ನಡಿಗರ ವಿಶೇಷತೆಯನ್ನು ಶ್ರೀವಿಜಯ ಹೇಗೆ ಸಾರಿದ್ದಾನೆ?
ಉತ್ತರ: ಕನ್ನಡಿಗರ ಮಾತಿನ ವೈಖರಿ, ಕನ್ನಡಿಗರ ಕಾವ್ಯ ಪರಿಣತಿಯನ್ನು ಕವಿ ಇಲ್ಲಿ ಹೆಮ್ಮೆಯಿಂದ ಹೇಳುತ್ತಾನೆ. ಪದಗಳ ಅರ್ಥಗಳನ್ನು ಸರಿಯಾಗಿ ತಿಳಿದುಕೊಂಡು, ಸಂದರ್ಭಕ್ಕೆ ಸರಿಯಾಗಿ ಮಾತನಾಡುವ ಕಲೆ ಕನ್ನಡಿಗರಿಗೆ ತಿಳಿದಿತ್ತು. ಬೇರೆಯವರು ಹೇಳಿದ್ದನ್ನು ಸರಿಯಾಗಿ ಅರಿತುಕೊಳ್ಳುವ ಸಾಮರ್ಥ್ಯವೂ ಅವರಿಗಿತ್ತು. ಸಾಕ್ಷರರಲ್ಲದವರೂ ಕಾವ್ಯಪ್ರಯೋಗ ಮಾಡುವುದರಲ್ಲಿ ಅಂದರೆ ಕಾವ್ಯ ರಚಿಸುವುದರಲ್ಲಿ ಪರಿಣಿತರಾಗಿದ್ದ ಕನ್ನಡಿಗರು ತುಂಬಾ ಚತುರರಾಗಿದ್ದರು ಎಂದು ಕವಿ ಶ್ರೀವಿಜಯ ಹೇಳುತ್ತಾನೆ.
2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ?
ಉತ್ತರ: ಕನ್ನಡ ಭಾಷಾ ಪ್ರಯೋಗದ ಬಗ್ಗೆ ಕವಿ ಇಲ್ಲಿ ಹೇಳುತ್ತಾನೆ. ಸಂಸ್ಕೃತದಲ್ಲಿ ಶುದ್ಧ ಸಂಸ್ಕೃತದಲ್ಲಿಯೇ ಮಾತನಾಡಿ, ಆದರೆ ಶುದ್ಧ ಕನ್ನಡ ಭಾಷೆಯಲ್ಲಿ ಸಂಸ್ಕೃತವನ್ನು ಬೆರೆಸುವುದು ಸಲ್ಲದೆಂದು ಕವಿಯ ಅಭಿಪ್ರಾಯ ಕನ್ನಡದಲ್ಲಿ ಸಂಸ್ಕೃತವನ್ನು ಬೆರೆಸಿದರೆ ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದಂತಾಗುವುದು ಎಂದು ನಯಸೇನನ ಅಭಿಪ್ರಾಯ. ಆದ್ದರಿಂದ ಶುದ್ಧ ಕನ್ನಡದಲ್ಲಿ ಮಾತನಾಡಬೇಕೆಂದು ಹೇಳುತ್ತಾನೆ.
3. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚ೦ದ್ರನು ಹೇಗೆ ವರ್ಣಿಸಿದ್ದಾನೆ?
ಉತ್ತರ: ಚಂಚಲತೆಗೆ ಹೆಸರಾದ ಕವಿಗಳು ಲಂಕೆಗೆ ಸೇತುವೆ ಕಟ್ಟಿದವು ಎಂದು ರಾಮಾಯಣದಲ್ಲಿ ಕವಿ ಹೇಳುತ್ತಾನೆ. ವಾಮನ ರೂಪಿಯಾದ ಬಾಲಕ ತನ್ನ ಒಂದು ಪಾದದಿಂದ ಮುಗಿಲನ್ನು ಮುಟ್ಟಿದನೆಂದೂ, ತ್ರಿವಿಕ್ರಮರೂಪಿಯಾದನೆಂದು ಕವಿ ಹೇಳುತ್ತಾನೆ. ಕಿರಾತನಾಗಿ ಬಂದ ಹರನೊಡನೆ ಯುದ್ಧ ಮಾಡುವಾಗ ಅರ್ಜುನನು ಹರನ ಗಂಟಲನ್ನು ತನ್ನ ಪಾದದಿಂದ ಒತ್ತಿದನೆಂದು ಕವಿ ವರ್ಣಿಸುತ್ತಾನೆ. ಕಪಿಗಳು ಸೇತುವೆ ಕಟ್ಟಿದ್ದು ನಿಜವೋ, ಸುಳ್ಳೋ ತಿಳಿಯದು; ವಾಮನ ತನ್ನ ಪಾದದಿಂದ ಮುಗಿಲನ್ನು ಮುಟ್ಟಿದ್ದು ಸತ್ಯವೋ ಅಸತ್ಯವೋ ತಿಳಿಯದು. ನರನು (ಅರ್ಜುನ) ಹರನ ಗಂಟಲನ್ನು ಒತ್ತಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಕವಿಗಳು ಬ್ರಹ್ಮನ ಸೃಷ್ಟಿಯಂತೆ ಕಾವ್ಯ ಸೃಷ್ಟಿಯನ್ನು ಮಾಡುತ್ತಾರೆ. ಈ ಘಟನೆ ಸತ್ಯವಿರಬಹುದೆ ಎಂಬ ಸಂಶಯ ಓದುಗರಿಗೆ ಬಾರದಂತೆ ಅತಿ ಶ್ರೇಷ್ಠವಾದ ಕಾವ್ಯವನ್ನು ರಚಿಸುವ ಕವಿಗಳ ಸಾಮರ್ಥ್ಯವನ್ನು ನೇಮಿಚಂದ್ರ ಇಲ್ಲಿ ಪ್ರಶಂಸೆ ಮಾಡುತ್ತಿದ್ದಾನೆ.
4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ?
ಉತ್ತರ: ಕನ್ನಡ ಭಾಷೆಯ ಸೌಂದರ್ಯದ ಬಗ್ಗೆ ಕವಿ ಇಲ್ಲಿ ಹೇಳುತ್ತಾನೆ. ಸುಲಿದ ಬಾಳೆಯ ಹಣ್ಣು ತಿನ್ನಲು ಎಷ್ಟು ಸುಲಭವೋ ಸಿಗುರು ತೆಗೆದ ಕಬ್ಬು ತಿನ್ನಲು ಎಷ್ಟು ಸುಲಭವೋ, ಹದವಾದ ಬಿಸಿಯಿರುವ ಹಾಲು ಕುಡಿಯಲು ಎಷ್ಟು ಹಿತವಾಗಿರುತ್ತದೋ ಹಾಗೆ ಕನ್ನಡ ಭಾಷೆ ಸುಲಭ, ಸುಂದರ, ಸರಳ, ಸುಂದರವಾದ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಮೋಕ್ಷ ಗಳಿಸಿಕೊಂಡಂತೆ ಆಗುವುದು. ಹೀಗಿರುವಾಗ ಸಂಸ್ಕೃತ ಭಾಷೆಯ ಅಗತ್ಯ ನಮಗಿದೆಯೆ? ಶುದ್ಧ ಕನ್ನಡ ಭಾಷೆ ಸಾಲದೆ? ಎಂದು ಹೇಳುತ್ತಾನೆ.
5. ಕನ್ನಡ ನಾಡಿನ ಪ್ರಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ.
ಉತ್ತರ: ಕನ್ನಡ ನಾಡಿನ ಸುಂದರ ಪ್ರಕೃತಿಯನ್ನು ಕವಿ ವರ್ಣಿಸಿದ್ದಾನೆ. ಮಲ್ಲಿಗೆಯ ಬಳ್ಳಿ, ಸಂಪಿಗೆ ಹೂವಿನ ಗಿಡ, ದಾಳಿಂಬೆ ಹಣ್ಣಿನ ಮರ, ತೆಂಗಿನ ಮರ, ಮಾವಿನರ, ಅಡಿಕೆಯ ಮರ-ಹೀಗೆ ಹಲವಾರು ರೀತಿಯ ಗಿಡಮರಬಳ್ಳಿಗಳು ಕನ್ನಡ ನಾಡಿನಲ್ಲಿ ಇವೆ ಎಂದು ಪ್ರಕೃತಿ ಸೌಂದರ್ಯವನ್ನು ಸಂಭ್ರಮದಿಂದ ವರ್ಣಿಸಿದ್ದಾನೆ.
ಇ) ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯದಲ್ಲಿ ಉತ್ತರಿಸಿ:
1. ಕನ್ನಡ ನಾಡಿನ ವಿಸ್ತಾರ, ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ?
ಉತ್ತರ: ಕನ್ನಡ ನಾಡಿನ ಸುಂದರ ಪ್ರಕೃತಿಯನ್ನು ಆಂಡಯ್ಯ ಕವಿ ವರ್ಣಿಸಿದ್ದಾನೆ. ಸುವಾಸನೆ ಬೀರುವ ಮಲ್ಲಿಗೆಯ ಬಳ್ಳಿ,ಸಂಪಿಗೆ ಹೂವಿನ ಗಿಡಗಳು ಕನ್ನಡ ನಾಡಿನಲ್ಲಿವೆ. ದಾಳಿಂಬೆ ಹಣ್ಣಿನ ಮರ, ತೆಂಗು, ಮಾವು, ಅಡಿಕೆಯ ಮರಗಳು ಇಲ್ಲಿವೆ. ಇಲ್ಲಿನ ಪ್ರಕೃತಿ ಗಮನ ಸೆಳೆಯುವಂತಿದೆ ಎಂದು ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತಿನ ಕುರಿತು ಕವಿಗಳು ವರ್ಣಿಸಿದ್ದಾರೆ.
2. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ?
ಉತ್ತರ: ಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡಬೇಕೆಂದೂ, ಕನ್ನಡದಲ್ಲಿ ಸಂಸ್ಕೃತವನ್ನು ಬೆರೆಸಕೂಡದೆಂದು ಕವಿ ಹೇಳುತ್ತಾನೆ. ಕನ್ನಡ-ಸಂಸ್ಕೃತ ಎರಡನ್ನೂ ಬೆರೆಸಿದರೆ ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದಂತಾಗುವುದೆಂದು ಹೇಳುತ್ತಾನೆ.
ಕನ್ನಡ ಭಾಷೆ ಸುಲಿದ ಬಾಳೆಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಹದವಾದ ಬಿಸಿಯಾದ ಹಾಲಿನಂತೆ ಸಿಹಿ ರುಚಿ, ಇಂತಹ ಸುಂದರ ಭಾಷೆಯಲ್ಲಿ ಮಾತನಾಡಿದರೆ ಮುಕ್ತಿ ಸಿಗುತ್ತದೆ. ಹೀಗಿರುವಾಗ ಸಂಸ್ಕೃತದ ಬದಲು ಕನ್ನಡ ಭಾಷೆ ಬಳಸಿದರಾಗದೆ? ಎಂಬುದು ಕವಿಯ ಅಭಿಪ್ರಾಯ.
ಸೃಷ್ಟಿಕರ್ತ ಬ್ರಹ್ಮನಂತೆ ಕವಿಗಳೂ ಕಲ್ಪನೆಯಿಂದ ಕಾವ್ಯವನ್ನು ಸೃಷ್ಟಿಸಬಲ್ಲರು. ಚಂಚಲತೆಗೆ ಹೆಸರಾದ ಕವಿಗಳು ಲಂಕೆಗೆ ಸೇತುವೆ ಕಟ್ಟಿದವು; ವಾಮನ ತನ್ನ ಒಂದು ಪಾದದಿಂದ ತ್ರಿವಿಕ್ರಮನಾಗಿ ಮುಗಿಲು ಮುಟ್ಟಿದನು; ಕಿರಾತನ ವೇಷದಲ್ಲಿ ಬಂದ ಹರನ ಗಂಟಲನ್ನು ಅರ್ಜುನ ತನ್ನ ಕಾಲಿನಿಂದ ಒತ್ತಿದನೆಂದು ಕವಿಗಳು ತಮ್ಮ ಕಾವ್ಯದಲ್ಲಿ ವರ್ಣಿಸಿದ್ದಾರೆ. ಇವೆಲ್ಲಾ ನಿಜವೋ ಸುಳ್ಳೋ ತಿಳಿಯದು. ಆದರೆ ಇವೆಲ್ಲವೂ ನಡೆದ ಘಟನೆ ಎಂಬಂತೆ, ಓದುಗರಿಗೆ ಸಂಶಯ ಬಾರದಂತೆ ಕವಿಗಳು ಸಾಹಿತ್ಯ ರಚಿಸುತ್ತಾರೆ ಎಂದು ಕವಿಗಳ ಸಾಮರ್ಥ್ಯವನ್ನು ನೇಮಿಚಂದ್ರ ಇಲ್ಲಿ ವರ್ಣಿಸಿದ್ದಾನೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್.
ಪದ್ಯ: ಕನ್ನಡ ನಾಡು-ನುಡಿ
ಕವಿ: ಶ್ರೀವಿಜಯ
ಸಂದರ್ಭಸ್ವಾರಸ್ಯ: ಕನ್ನಡಿಗರು ಪದಗಳ ಅರ್ಥಗಳನ್ನು ಸರಿಯಾಗಿ ತಿಳಿದುಕೊಂಡು, ಸಂದರ್ಭೋಚಿತವಾಗಿ ಮಾತನಾಡುತ್ತಾರೆ. ಬೇರೆಯವರು ಹೇಳಿದ್ದನ್ನು ಸರಿಯಾಗಿ ಅರಿತುಕೊಳ್ಳುವ ಸಾಮರ್ಥ್ಯ ಅವರಲ್ಲಿತ್ತು. ಸಾಕ್ಷರರಲ್ಲದಿದ್ದರೂ ಕಾವ್ಯ ರಚಿಸುವುದರಲ್ಲಿ ಪರಿಣಿತರಾಗಿದ್ದ ಕನ್ನಡಿಗರು ತುಂಬಾ ಚತುರರಾಗಿದ್ದರೆಂದು ಕವಿ ಶ್ರೀವಿಜಯ ಕನ್ನಡಿಗರ ಜಾಣ್ಮ ಸಾಮರ್ಥ್ಯವನ್ನು ಇಲ್ಲಿ ಹೊಗಳಿದ್ದಾನೆ.
2. ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ.
ಪದ್ಯ : ಕನ್ನಡ ನಾಡು-ನುಡಿ
ಕವಿ: ನಯಸೇನ.
ಸಂದರ್ಭಸ್ವಾರಸ್ಯ: ಶುದ್ಧ ಸಂಸ್ಕೃತದಲ್ಲಿ ಮಾತನಾಡಿ ಅಥವಾ ಶುದ್ಧ ಕನ್ನಡದಲ್ಲಿ ಮಾತನಾಡಿ ಎಂದು ಕವಿ ಹೇಳುತ್ತಾನೆ. ಕನ್ನಡ, ಸಂಸ್ಕೃತ ಎರಡನ್ನೂ ಬೆರೆಸಬೇಡಿ. ಅವೆರಡೂ ಭಾಷೆಯನ್ನು ಬೆರೆಸಿದರೆ ತುಪ್ಪ ಮತ್ತು ಎಣ್ಣೆಯನ್ನು ಬೆರೆಸಿದಂತಾಗುತ್ತದೆ ಎಂದು ಹೇಳುತ್ತಾರೆ.
3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ.
ಪದ್ಯ: ಕನ್ನಡ ನಾಡು-ನುಡಿ
ಕವಿ: ನೇಮಿಚಂದ್ರ
ಸಂದರ್ಭಸ್ವಾರಸ್ಯ: ಸೃಷ್ಟಿಕರ್ತ ಬ್ರಹ್ಮನಂತೆ ಕವಿಗಳೂ ಕಲ್ಪನೆಯಿಂದ ಕಾವ್ಯವನ್ನು ರಚಿಸಬಲ್ಲರು. ಆ ಕಾವ್ಯಗಳಲ್ಲಿ ಸತ್ಯವಾದ ವಿಷಯ ಇರಬಹುದು ಅಥವಾ ಸುಳ್ಳಿನ ಕಂತೆಯನ್ನೇ ಸತ್ಯ ಎಂಬಂತೆ ವರ್ಣಿಸಿರಬಹುದು. ಅಂತಹ ಸಾಮರ್ಥ್ಯ ಕವಿಗಳಿಗೆ ಇದೆ ಎಂದು ನೇಮಿಚಂದ್ರ ಈ ಉದಾಹರಣೆಯನ್ನು ಕೊಡುತ್ತಾನೆ. ಚಂಚಲತೆಗೆ ಹೆಸರಾದ ಕಪಿಗಳು ಲಂಕೆಗೆ ಸೇತುವೆ ಕಟ್ಟಿದವೋ ಇಲ್ಲವೋ ತಿಳಿಯದು. ಆದರೆ ಕವಿಯಂತೂ ತನ್ನ ಕಾವ್ಯದಲ್ಲಿ ಸೇತುವೆ ಕಟ್ಟಿದನೆಂದು ಹೇಳುತ್ತಾನೆಂಬುದು ನೇಮಿಚಂದ್ರನ ಹೇಳಿಕೆ.
4. ಕಳೆದ ಸಿಗುರಿನ ಕಬ್ಬಿನಂದದಿ.
ಪದ್ಯ : ಕನ್ನಡ ನಾಡು-ನುಡಿ
ಕವಿ: ಮಹಲಿಂಗರಂಗ
ಸಂದರ್ಭ ಸ್ವಾರಸ್ಯ: ಸಿಗುರು ತೆಗೆದ ಕಬ್ಬು ತಿನ್ನಲು ಎಷ್ಟು ಸಿಹಿಯೋ, ಸುಲಭವೋ, ಕನ್ನಡ ಭಾಷೆಯೂ ಅಷ್ಟೆ ಸುಲಭ ಸರಳ ಎಂದು ಕನ್ನಡ ಭಾಷೆಯ ಸೌಂದರ್ಯದ ಬಗ್ಗೆ ಕವಿ ಮಹಲಿಂಗರಂಗನು ವರ್ಣಿಸುತ್ತಾನೆ.
5. ದಾಳಿಂಬಮಲ್ಲದೊಪ್ಪುವ ಚೆಂದೆಂ.
ಪದ್ಯ : ಕನ್ನಡ ನಾಡು-ನುಡಿ
ಕವಿ: ಆಂಡಯ್ಯ
ಸಂದರ್ಭಸ್ವಾರಸ್ಯ: ಕನ್ನಡ ನಾಡಿನ ಸುಂದರ ಪ್ರಕೃತಿಯನ್ನು ಕವಿ ಇಲ್ಲಿ ವರ್ಣಿಸಿದ್ದಾನೆ. ಕನ್ನಡ ನಾಡಿನಲ್ಲಿ ಸುವಾಸನೆ ಬೀರುವ ಮಲ್ಲಿಗೆಯ ಬಳ್ಳಿ, ಸಂಪಿಗೆಯ ಗಿಡಗಳಲ್ಲದೆ, ರುಚಿಯಾದ ದಾಳಿಂಬೆ ಹಣ್ಣಿನ ಮರ, ಫಲಭರಿತವಾದ ತೆಂಗಿನ ಮರಗಳೂ ಇವೆ ಎಂದು ಹೇಳುತ್ತಾನೆ.