ಪದ್ಯದ ಸಾರಾಂಶ:
ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಪಾರಿವಾಳದ ಪುಟ್ಟ ಸಂಸಾರ ವಾಸಿಸುತ್ತಿದ್ದವು. ಸದಾ ಆ ಪಾರಿವಾಳಗಳು ಒಟ್ಟಿಗೆ ಇರುತ್ತಿದ್ದವು. ಒಂದು ದಿನವೂ ಒಂದನ್ನೊಂದು ಅಗಲುತ್ತಿರಲಿಲ್ಲ. ಪುಟ್ಟ ಪಾರಿವಾಳದ ಸಂಸಾರದಲ್ಲಿ ಹಿಗ್ಗು ತುಂಬಿತ್ತು.
ಮೊಟ್ಟೆಯೊಡೆದು ಮರಿ ಹೊರಬಂದಾಗ ಪಾರಿವಾಳದ ಸಂಸಾರದಲ್ಲಿ ಪ್ರೀತಿ ಹೆಚ್ಚಿತು. ಪುಟ್ಟ ಮರಿಗಳ ಮಧುರ ಸದ್ದು ಕೇಳಿ ಪಾರಿವಾಳಗಳು ಆನಂದದಿಂದ ಬಾಳಿದವು.
ಒಮ್ಮೆ ಕಾಡಿಗೆ ಬೇಡ ಬಂದು ಬಲೆ ಬೀಸಿದಾಗ ಪುಟ್ಟ ಮರಿಗಳು ಬಲೆಯಲ್ಲಿ ಸಿಲುಕಿ ಕಿರುಚತೊಡಗಿದವು. ಮರಿಗಳ ದುರವಸ್ಥೆ ಕಂಡು ತಾಯಿ ಪಾರಿವಾಳಕ್ಕೆ ಸಂಕಟವಾಯಿತು. ಮರಿಗಳನ್ನು ಅಗಲಿರಲಾರದೆ ತಾಯಿ ಪಾರಿವಾಳ ಬಲೆಗೆ ಧುಮುಕಿತು. ಹೆಂಡತಿಯನಗಲಿರದ ಗಂಡು ಹಕ್ಕಿ ಅಳುತ್ತ ತಾನೂ ಬಲೆಗೆ ಧುಮುಕಿತು.
ಕುರುಡು ವಾತ್ಸಲ್ಯದಲ್ಲಿ ವಿವೇಕ ಕಳೆದುಕೊಂಡು ಪಾರಿವಾಳಗಳ ಸಂಸಾರ ಬೇಡನಿಗೆ ಆಹಾರವಾದವು. ಆದ್ದರಿಂದ ಮೋಡ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ, ವ್ಯಾಮೋಹವನ್ನು ತೊರೆದು ಬಾಳಬೇಕು. ಏನೇ ಕಷ್ಟ ಬಂದರೂ ಕೂಡ ತಾಳಬೇಕು ಎಂದು ಕವಿ ಎಕ್ಕುಂಡಿ ಯವರು ಈ ಪದ್ಯದ ಮೂಲಕ ಸಮಾಜಕ್ಕೆ ಸಂದೇಶವನ್ನು ಕೊಟ್ಟಿದ್ದಾರೆ.
8) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು?
ಉತ್ತರ: ದಟ್ಟ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು.
2 ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು?
ಉತ್ತರ: ಜೋಡಿ ಪಾರಿವಾಳಗಳು ಹಗಲಿರುಳು ಜೊತೆಗೂಡಿ ಬಾಳುತ್ತಿದ್ದವು.
3, ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು?
ಉತ್ತರ: ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸಿದವು.
4. ಏನನ್ನು ತೊರೆದು ಬಾಳಬೇಕು?
ಉತ್ತರ: ವ್ಯಾಮೋಹವನ್ನು ತೊರೆದು ಬಾಳಬೇಕು.
ಆ) ಈ ಪ್ರಶ್ನೆಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ:
1. ಪಾರಿವಾಳಗಳ ಆನಂದಕ್ಕೆ ಕಾರಣವೇನು?
ಉತ್ತರ: ಪಾರಿವಾಳಗಳ ಸಂಸಾರದಲ್ಲಿ ಹಗಲಿರುಳು ಸಂತೋಷ ತುಂಬಿರುತ್ತಿತ್ತು. ಅವುಗಳ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ, ಅವುಗಳ ಮಧುರ ಸದ್ದು ಕೇಳಿ ಪಾರಿವಾಳಗಳಿಗೆ ಆನಂದವಾಯಿತು.
2. ಬೇಡ ಏನು ಮಾಡಿದನು?
ಉತ್ತರ: ಕಾಡಿಗೆ ಬಂದ ಬೇಡನು ಪಾರಿವಾಳಗಳನ್ನು ಹಿಡಿಯಲು ಬಲೆ ಬೀಸಿದನು. ಬೇಡನ ಬಲೆಗೆ ಪುಟ್ಟ ಮರಿಗಳು ಸಿಲುಕಿ ಚೇತ್ಕರಿಸತೊಡಗಿದವು.
ಇ) ಈ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ: ಅಪಘಾತಕ್ಕೆ ಅವಸರವೇ ಕಾರಣ, ಯಾವಾಗಲೂ ತಾಳ್ಮೆಯಿಂದ ಕೆಲಸ ಮಾಡಬೇಕು. ಯಾವುದೇ ಕೆಲಸಕ್ಕೂ ದುಡುಕಿನ ನಿರ್ಧಾರ ಸಲ್ಲದು.
2. ‘ಪಾರಿವಾಳ’ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ: ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಬಿಳಿ ಪಾರಿವಾಳಗಳು ಸಂಸಾರ ಹೂಡಿಕೊಂಡಿದ್ದವು. ಸದಾ ಜೋಡಿಯಾಗಿ ಸಂತೋಷದಿಂದ ಇವು ಇರುತ್ತಿದ್ದವು. ಪಾರಿವಾಳವು ಮೊಟ್ಟೆ ಇಟ್ಟು, ಆ ಮೊಟ್ಟೆ ಒಡೆದು ಮರಿಗಳು ಹೊರಬಂದಾಗ ಪಾರಿವಾಳಗಳ ಜೋಡಿಗೆ ಅಪಾರವಾದ ಸಂತೋಷವಾಗುತ್ತದೆ.
ಇದೇ ಸಮಯದಲ್ಲಿ ಕಾಡಿಗೆ ಬಂದ ಬೇಡನು ಪಾರಿವಾಳ ಗಳನ್ನು ಹಿಡಿಯಲು ಬಲೆ ಬೀಸುತ್ತಾನೆ. ಪುಟ್ಟ ಮರಿಗಳು ಬಲೆಯಲ್ಲಿ ಸಿಕ್ಕಿ ಬೀಳುತ್ತವೆ. ಬಂಧಿಗಳಾಗಿ ಕೂಗುತ್ತಿರುವ ಮರಿಗಳನ್ನು ನೋಡಿ ನಡೆಸಲಾಗದೆ ತಾಯಿ ಪಾರಿವಾಳವೂ ಬಲೆಗೆ ಧುಮುಕಿತು. ತನ್ನ ಜೊತೆಗಾತಿ ಬಲೆಗೆ ಹಾರಿದ್ದನ್ನು ಕಂಡು ಗಂಡು ಪಾರಿವಾಳವೂ ಬಲೆಗೆ ಧುಮುಕಿತು. ಆತುರದಿಂದಾಗಿ ಇಡೀ ಸಂಸಾರವೇ ಬೇಡನ ವಶವಾಯಿತು. ಆದ್ದರಿಂದ ‘ಮೋಹ ಮುಸುಕಿದ ಬುದ್ದಿ; ಸರ್ವನಾಶದ ಸಿದ್ಧಿ’ ಎಂದು ಲೇಖಕರು ಹೇಳುತ್ತಾರೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ’
ಪದ್ಯ – ಪಾರಿವಾಳ
ಆಕರ – ಸಮಗ್ರ ಕಥನ ಕವನಗಳು.
ಕವಿ – ಸು.ರಂ. ಎಕ್ಕುಂಡಿ
ಸಂದರ್ಭ ಸ್ವಾರಸ್ಯ: ಮರಿ ಪಾರಿವಾಳಗಳು ಬೇಡನ ಬಲೆಗೆ ಸಿಲುಕಿ ಕೂಗಲು ಪ್ರಾರಂಭಿಸಿದವು. ಆಗ ಮರಿಗಳ ಸಂಕಟ ನೋಡ ಲಾರದೆ ತಾಯಿ ಬಲೆಗೆ ಧುಮುಕಿತು. ಹೆಂಡತಿಯನಗಲಿರದ ಗಂಡು ಪಾರಿವಾಳವೂ ಬಿಕ್ಕಿ ಬಿಕ್ಕಿ ಅಳುತ್ತಾ ಹೆಂಡತಿಯ ಬಳಿ ಬಲೆಯೊಳಗೆ ಬಂದಿತು.
2. “ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ”
ಪದ್ಯ – ಪಾರಿವಾಳ
ಕವಿ – ಸು.ರಂ. ಎಕ್ಕುಂಡಿ
ಆಕರ – ಸಮಗ್ರ ಕಥನ ಕವನಗಳು. –
ಸಂದರ್ಭ ಸ್ವಾರಸ್ಯ – ಮರಿಗಳ ಸಂಕಟವನ್ನು ಕಂಡ ತಾಯಿ ಬಲೆಗೆ ಧುಮುಕಿತು. ಹೆಂಡತಿಯನಗಲಿರದ ಗಂಡು ಪಾರಿವಾಳವೂ ಬಲೆಯೊಳಗೆ ಬಂತು. ಪಾರಿವಾಳದ ಇಡೀ ಸಂಸಾರ ಬೇಡನಿಗೆ ಆಹಾರವಾಯಿತು. ವ್ಯಾಮೋಹವನ್ನು ತೊರೆದರೆ, ತಾಳ್ಮೆಯಿಂದ ಆಲೋಚಿಸಿದರೆ ಹೀಗಾಗುವುದಿಲ್ಲ. ‘ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ’ಯಾದ್ದರಿಂದ ವ್ಯಾಮೋಹವನ್ನು ಬಿಟ್ಟು ತಾಳ್ಮೆಯಿಂದ ಬದುಕಬೇಕೆಂಬ ಸಂದೇಶವನ್ನು ಕವಿಗಳು ಇಲ್ಲಿ ಕೊಟ್ಟಿದ್ದಾರೆ.
ಸೈದ್ಧಾಂತಿಕ ಭಾಷಾಭ್ಯಾಸ
ಅಲಂಕಾರಗಳು (ಮುಂದುವರಿದುದು)
ರೂಪಕಾಲಂಕಾರ: ಸೂತ್ರ:ಉಪಮೇಯ ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ.
ಉದಾ: ಸೀತೆಯ ಮುಖಕಮಲ ಅರಳಿತು
ಉಪಮೇಯ – ಸೀತೆಯ ಮುಖ
ಉಪಮಾನ-ಕಮಲ
ಅಲಂಕಾರ– ರೂಪಕಾಲಂಕಾರ
ಸಮನ್ವಯ: ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ. ಹಾಗಾಗಿ ಇದು ರೂಪಕಾಲಂಕಾರ.
ದೃಷ್ಟಾಂತಾಲಂಕಾರ: ಸೂತ್ರ: ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರ.
ಉದಾ: 1. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಕವಿ ಯಾದವನು ತನ್ನ ಕೃತಿಯನ್ನು ರಚಿಸದಿರುವನೇ?
2. ಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರುವನೇ?
ಸಮನ್ವಯ: ದುರ್ಜನರು ನಿಂದಿಸುತ್ತಾರೆಂಬ ಹೆದರಿಕೆ ಯನ್ನು ಗಣನೆಗೆ ತೆಗೆದುಕೊಳ್ಳದೇ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ ಕತ್ತಲೆಯ ಹೆದರಿಕೆಯಿಂದ ಸೂರ್ಯನು ಸುಮ್ಮನಿರದೆ ಕಿರಣವನ್ನು ಪಸರಿಸಿಯೇ ಪಸರಿಸುತ್ತಾನೆ ಎಂಬ ಮಾತಿಗೂ ಅರ್ಥ ಸಾದೃಶದಿಂದ ಬಿಂಬ ಪ್ರತಿಬಿಂಬಭಾವವು ಉಪಮೇಯ ಉಪಮಾನಗಳೆರಡ ರಲ್ಲೂ ವ್ಯಕ್ತವಾಗುವದರಿಂದ ಇದು ದೃಷ್ಟಾಂತಾಲಂಕಾರ.
ಭಾಷಾ ಚಟುವಟಿಕೆ
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
1. ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ.
ಉತ್ತರ: ಉಪಮೇಯ ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ
ರೂಪಕಾಲಂಕಾರ,
ಉದಾ: ಸೀತೆಯ ಮುಖಕಮಲ ಅರಳಿತು.
2. ಸಾವಿತ್ರಿಯ ಮುಖಕಮಲ ಅರಳಿತು. ಇಲ್ಲಿರುವ . ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿರಿ.
ಉತ್ತರ:
ಉಪಮೇಯ-ಸಾವಿತ್ರಿಯ ಮುಖ
ಉಪಮಾನ-ಕಮಲ
ಅಲಂಕಾರ-ರೂಪಕಾಲಂಕಾರ,
ಸಮನ್ವಯ- ಉಪಮೇಯವಾದ ಸಾವಿತ್ರಿಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರ,
3. ‘ಪಾರಿವಾಳ’ ಪದ್ಯದಲ್ಲಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿ ಮಾಡಿ.
ಉತ್ತರ: ಹೂಡಿ-ಜೋಡಿ, ಒಂದನೊಂದು=ಬಂದು,
ಕೇಳಿ=ಬಾಳಿ, ಸೆರೆಗೆ=ಹೊರಗೆ,
ಹಕ್ಕಿ=ಬಿಕ್ಕಿ.
ಆ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ
ಕಂಠಪಾಠ ಮಾಡಿರಿ.
1. ದಟ್ಟ ಕಾಡಿನಲೊಂದು…………………
……………………………………………..
……………………ಪಾರಿವಾಳಗಳ ಜೋಡಿ.
ಉತ್ತರ:
ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ
ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿ ಪಾರಿವಾಳಗಳ ಜೋಡಿ.
2. ಹಗಲಿರುಳು ………………………..
…………………………………………..
……………………ಹೊದರಿನಲ್ಲಿ ಬಂದು
ಉತ್ತರ:
ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ
ಎಂದಿಗೂ ಆಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು.